ವಿಧಾನಸಭೆ: ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ, ಮುಂದಿನ ಚುನಾವಣೆಯೂ ನನ್ನ ನಾಯಕತ್ವದಲ್ಲಿಯೇ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸಿದ್ದರಾಮಯ್ಯ 5 ವರ್ಷ ಪೂರೈಸುವುದಿಲ್ಲ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವುದೆಲ್ಲ ಹಗಲು ಕನಸು. ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ತಲೆ ಎತ್ತುವುದಿಲ್ಲ. ಇದನ್ನು ಬರೆದುಕೊಡುತ್ತೇನೆ, ಸುಮ್ಮನೇ ಮಾತನಾಡಬೇಡಿ ಎಂದು ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದರು.
ನನ್ನ ಅವಧಿಯಲ್ಲಿ ಅಕ್ರಮವಾಗಿ ಒಂದಿಂಚೂ ಡಿನೋಟಿಫಿಕೇಷನ್ ನಡೆದಿಲ್ಲ, ಡಿನೋಟಿಫಿಕೇಷನ್ ಅಕ್ರಮಗಳೆಲ್ಲ ಬಿಜೆಪಿ ಸರ್ಕಾರದ ಕೂಸುಗಳು. ನನಗೆ ಇದರ ಬಗ್ಗೆ ಯಾವುದೇ ಭಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಅರ್ಕಾವತಿ ಬಡಾವಣೆ ಅಕ್ರಮ ಕುರಿತ ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ಸದನದಲ್ಲಿ ಹೋರಾಟ ನಡೆಸಬೇಕಾಯಿತು. ಸಚಿವ ಕೆ.ಜೆ ಜಾರ್ಜ್ ಹೊರತುಪಡಿಸಿ, ಮತ್ಯಾವುದೇ ಶಾಸಕರು ಹಾಗೂ ಸಚಿವರು ಸಿದ್ದರಾಮಯ್ಯ ನೆರವಿಗೆ ಬರಲಿಲ್ಲ. ನಿಮ್ಮ ಏಕಾಂಗಿ ಹೋರಾಟವೇ ಎಲ್ಲ ಸಂದೇಶ ನೀಡುತ್ತದೆ. ಈ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾಗಲ್ಲ ಎಂದು ಬರೆದುಕೊಟ್ಟಿದ್ದೀರಿ. ನೀವು ಹೇಳಿದ್ದು ಯಾವುದೂ ಸಂಭವಿಸುವುದಿಲ್ಲ ಎಂದು ಬಿಜೆಪಿಯ ಸಿ.ಟಿ ರವಿ ಕಿಚಾಯಿಸಿದರು.