ವಿಧಾನಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕದಾಸರ ಪುನರ್ಜನ್ಮ. ಅವರು ಆರೋಗ್ಯ ಭಾಗ್ಯ, ಅನ್ನಭಾಗ್ಯದ ಜತೆಗೆ `ಶೀಲಭಾಗ್ಯ'ವನ್ನೂ ನೀಡಿದ್ದಾರೆ...
ಕಾಂಗ್ರೆಸ್‍ನ ಮೊಯಿದ್ದೀನ್ ಬಾವ ವಿಧಾನಸಭೆಯಲ್ಲಿ ಈ ಮಾತು ಹೇಳಿದಾಗ, ಸದನದಲ್ಲಿದ್ದ ಒಬ್ಬೊಬ್ಬ ಸದಸ್ಯರದ್ದೂ ಒಂದೊಂದು ರೀತಿಯ ವ್ಯಾಖ್ಯಾನವಾಯಿತು. ಕನಕದಾಸರಾದರೆ ಅವರ ತಂಬೂರಿ ಎಲ್ಲಿ ಎಂದು ಒಬ್ಬರು ಕೆಣಕಿದರೆ, ಅದನ್ನು ಅವರಿಗೆ ಸದ್ಯದಲ್ಲಿಯೇ ಕೊಟ್ಟು ಇಲ್ಲಿಂದ ಕಳುಹಿಸುತ್ತಾರೆ ಎಂದು ಇನ್ನೊಬ್ಬರು ಕಾಲೆಳೆದರು.
ಶೀಲಭಾಗ್ಯವಂತೆ, ಅದೆಲ್ಲಿಂದ ಬಂತು ರೀ... ಎಂಬ ಪ್ರಶ್ನೆ ಹರಿದಾಡಿತು. ಎಲ್ಲ ಭಾಗ್ಯ ಕೊಟ್ಟೇ ಜನರು ನಮ್ಮೊಂದಿಗಿರುವುದು, ನೀವು ಏನೂ ಕೊಡಲಿಲ್ಲ ಎಂದು ಕಾಂಗ್ರೆಸ್‍ನವರು ಜರೆದರು. `ಹೌದೌದು, ತಂಬೂರಿ ಕೊಟ್ಟು ಕಳುಹಿಸುತ್ತೀರಿ, ನೋಡ್ತಾ ಇರಿ' ಎಂದು ಬಿಜೆಪಿಯ ಗೋವಿಂದ ಕಾರಜೋಳ ಮಾತು ಹರಿಬಿಟ್ಟರು. ಕೆಲವರು ನಿಂತು, ಕೆಲವರು ಕುಳಿತೇ ಈ ಪ್ರಸಂಗದಲ್ಲಿ ಭಾಗಿಯಾಗಿದ್ದರಿಂದ ಯಾರು ಯಾವುದಕ್ಕೆ, ಯಾರಿಗೆ ಉತ್ತರ ನೀಡಿದರು ಎಂಬುದು ಸ್ಪಷ್ಟವಾಗಲಿಲ್ಲ.
ಸಭಾಪತಿಯಿಂದ ಗದರಿಸಿಕೊಂಡ ಐವಾನ್
ವಿಧಾನ ಪರಿಷತ್ತು: ಎಲ್ಲರಿಗೂ ಮಾತನಾಡಲು 20-30 ನಿಮಿಷ ಸಮಯ ಕೊಡ್ತೀರಾ, ನನಗೆ ಮಾತ್ರ 10 ನಿಮಿಷವೆ? ಬೇಡ ಬಿಡಿ ನಾನು ಮಾತನಾಡುವುದೇ ಇಲ್ಲ ಎಂದು ಏರಿದ ದನಿಯಲ್ಲಿ ಸಭಾಪತಿ ವಿರುದ್ಧ ಮಾತನಾಡಿದ ಸದಸ್ಯ ಐವಾನ್ ಡಿಸೋಜ ಸದನದಲ್ಲಿ ಗದರಿಸಿಕೊಂಡ ಘಟನೆ ನಡೆಯಿತು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಲು ಆರಂಭಿಸಿದ ಐವಾನ್ ಡಿಸೋಜ ಸಭಾಪತಿ ವಿರುದ್ಧವೇ ಬಹಿರಂಗ ಬೇಸರ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಸಭಾಪತಿ, ನನ್ನ ಮೇಲೆಯೇ ಆಪಾದನೆ ಮಾಡುತ್ತೀರಾ, ಇದ್ಯಾವ ಧರ್ಮ ಎಂದು ಗದರಿದರು. ಅಷ್ಟೇ ಅಲ್ಲ, ನಿಮಗಿಷ್ಟ ಬಂದಷ್ಟು ಮಾತನಾಡಿ.
ನೀವು ಮಾತನಾಡುವಷ್ಟು ಹೊತ್ತು ನಾನು ಕುಳಿತೇ ಇರುತ್ತೇನೆ ಎಂದು ಬೇಸರಿಸಿದರು. ನಾಳೆ ಮಾತನಾಡುವಿರೆ ಎಂದು ನಿಮ್ಮಲ್ಲಿ ಕೇಳಿದ್ದೆ, ಇಂದೇ ಮಾತನಾಡಿದರೆ 10 ನಿಮಿಷವಷ್ಟೆ ಅವಕಾಶ ಸಿಗುತ್ತದೆ ಎಂದು ಹೇಳಿದ್ದರೂ ಇಂದೇ ಮಾತನಾಡುವುದಾಗಿ ಹೇಳಿ ಈಗ ನನ್ನ ಮೇಲೆ ಆಪಾದನೆ ಮಾಡುತ್ತೀರಾ ಎಂದು ಸಭಾಪತಿ ಹೇಳಿದರಲ್ಲದೇ, ನಿಮ್ಮ ಈ ವರ್ತನೆ ಯಾವ ರೀತಿ ಸಂದೇಶ ರವಾನೆ ಆಗುತ್ತದೆ ಗೊತ್ತಿದೆಯೋ ಎಂದು ಪ್ರಶ್ನಿಸಿದರು.
ಇಷ್ಟಾದರೂ ಆಡಳಿತ ಪಕ್ಷದ ಸದಸ್ಯರು ಐವಾನ್ ಪರವಾಗಿ ಮಾತನಾಡಲು ಎದ್ದು ನಿಂತರು. ಅಂತಿಮವಾಗಿ ಸ್ಪೀಕರ್ ಅವರ ಮುಖ ಚಹರೆ ಗಮನಿಸಿ ಎಲ್ಲರೂ ಕುಳಿತುಕೊಂಡರು, ಐವಾನ್ ಮಾತು ಮುಂದುವರಿಸಿದರು.