ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ, ಟ್ರಾಫಿಕ್ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಭವಿಷ್ಯದಲ್ಲಿ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಯಾವ ರೀತಿ ಕ್ರಮ ಕೈಗೊಳ್ಳಬೇಕು, ಏನು ನೀತಿ ಮಾಡಬೇಕು ಎಂದು ನಗರದ ಶಾಸಕರು, ಸಚಿವರೂ ಸೇರಿಕೊಂಡು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬನ್ನಿ. ನಂತರ ಸದನದಲ್ಲಿ ಶಾಸನವನ್ನೂ ಬೇಕಾದರೆ ರಚಿಸೋಣ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.
ರಾಜ್ಯಪಾಲರ ಭಾಷಣದ ಮೇಲೆ ಬಿಜೆಪಿಯ ರವಿಸುಬ್ರಹ್ಮಣ್ಯ ಮಾತನಾಡುತ್ತಿದ್ದಾಗ, ಸೂಕ್ತ ಸಲಹೆ ನೀಡಿದ ಸ್ಪೀಕರ್ ಎಲ್ಲ ಶಾಸಕರು ಒಂದಾಗಿ ಒಂದು ಸಭೆ ಮಾಡಿ. ಬೆಂಗಳೂರಿನ ಅಭಿವೃದ್ಧಿಗೆ ಯೋಜನೆ ರೂಪಿಸಿ. ಹೊಸ ಆ್ಯಕ್ಟ್ ತನ್ನಿ ಎಂದರು. ಮುಖ್ಯಮಂತ್ರಿ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಮತ್ತೆ ಎಲ್ಲರೊಂದಿಗೆ ಚರ್ಚಿಸುತ್ತೇವೆ. ಬಿಬಿಎಂಪಿಗೆ ಸದ್ಯದಲ್ಲಿಯೇ ಹೊಸ ಕಾನೂನು ತರುತ್ತೇವೆ ಎಂದು ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಮಜಾಯಿಷಿ ನೀಡಿದರು.
ಬಿಬಿಎಂಪಿಯಲ್ಲಿ ಸಾವಿರಾರು ಕೋಟಿ ಸಾಲ ಉಳಿದುಕೊಂಡಿದೆ. ಗುತ್ತಿಗೆದಾರರಿಗೂ ಬಿಲ್ ನೀಡಿಲ್ಲ. ಬಿಬಿಎಂಪಿಯನ್ನು ಸಾಲದಿಂದ ಮುಕ್ತ ಮಾಡಬೇಕು. ಸರ್ಕಾರ ಈ
ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಕೊಳ್ಳಬೇಕು ಎಂದು ರವಿಸುಬ್ರಹ್ಮಣ್ಯ ಒತ್ತಾಯಿಸಿದರು.