ಮೈಸೂರು: ಕಾಂಗ್ರೆಸ್ ಸರ್ಕಾರದ ಸಚಿವರ ಮೇಲೆ ಆರೋಪಗಳಿದ್ದರೆ ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು.
ಭಾನುವಾರ ನಗರದ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರದ ಸಚಿವರ ಮೇಲೆ ಯಾವುದೇ ಆರೋಪಗಳಿದ್ದರೂ ದಾಖಲೆ ಸಮೇತ ಸಾಬೀತುಪಡಿಸಿ, ಕಾನೂನು ಹೋರಾಟ ನಡೆಸಲಿ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಎಷ್ಟು ಮಂದಿ ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಸೇರಿದ್ದರು ಎಂಬುದು ಗೊತ್ತಿದೆ ಎಂದು ಕಿಡಿಕಾರಿದರು.
ಶಾಸಕರು, ಸಚಿವರು ತಪ್ಪು ಮಾಡಿದ್ದರೆ ಲೋಕಾಯುಕ್ತದಂತಹ ಸಂಸ್ಥೆಯ ಮುಂದೆ ಹೋಗಲಿ. ಅದು ಬಿಟ್ಟು ಬೀದಿಯಲ್ಲಿ ನಿಂತು ಮಾತನಾಡುವುದು ಒಳ್ಳೆಯದಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರುವುದಕ್ಕೂ ನಮಗೂ ಸಂಬಂಧ ಇಲ್ಲ.
ಕರ್ನಾಟಕದಲ್ಲಿಯೇ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷರು ಇದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಂದಾಗ ಬೇಡ ಎನ್ನಲು ಆಗುತ್ತದೆಯೇ? ಅಮಿತ್ ಶಾ ಅಂಥ ನೂರು ಜನ ಬಂದರೂ ಏನೂ ಮಾಡಲು ಆಗುವುದಿಲ್ಲ ಎಂದು ಅವರು ತಿಳಿಸಿದರು.
ದಲಿತ ನಾಯಕರು ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯದ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಅನಿಸಿಕೆ ಮತ್ತು ಭಾವನೆಯನ್ನು ಸಂದರ್ಭ ಬಂದಾಗ ಹೇಳುತ್ತೇನೆ. ಸಚಿವರಾದ ವಿ.ಶ್ರೀನಿವಾಸಪ್ರಸಾದ್ ಮತ್ತು ಎಚ್. ಆಂಜನೇಯ ಅವರು ತಮ್ಮದೆ ಅನಿಸಿಕೆ ಹೇಳಿದ್ದಾರೆ ಎಂದರು.
ಸುತ್ತೂರು ಶ್ರೀಗಳೊಂದಿಗೆ ಶಿಕ್ಷಣ ಸಂಸ್ಥೆಗಳ ವಿಚಾರದ ಬಗ್ಗೆ ಚರ್ಚಿಸಲಾಗಿದೆಯೇ ಹೊರತು ರಾಜಕೀಯ ಚರ್ಚೆ ಇಲ್ಲ. ಸ್ವಾಮೀಜಿಗಳೊಂದಿಗೆ ಇದುವರೆಗೂ ರಾಜಕೀಯ ಮಾತನಾಡಿಲ್ಲ. ಅವರೂ ಮಾತನಾಡಿಲ್ಲ. 2006ರ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಬಗ್ಗೆ ಅನೇಕ ಸಲಹೆ, ಸೂಚನೆ ನೀಡಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಅವರು ಹೇಳಿದರು.