ಮೈಸೂರು: ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಡಿನೋಟಿಫೈ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಬಡಾವಣೆ ಜಮೀನು ಡಿನೋಟಿಫೈ ಮಾಡಿರುವುದನ್ನು ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಗುಂಟೆ ಸಹ ಡಿನೋಟಿಫೈ ಮಾಡಿಲ್ಲ ಎನ್ನುತ್ತಿದ್ದಾರೆ.
ಆದರೆ, ಅರ್ಕಾವತಿ ಬಡಾವಣೆಯಲ್ಲಿ ಒಂದು ಗುಂಟೆಯಲ್ಲ, 700 ಎಕಲೆ ಡಿನೋಟಿಫೈ ಮಾಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಸರ್ಕಾರ ಸಹ ಡಿನೋಟಿಫೈ ಮಾಡಿಲ್ಲ ಎಂದರು.
ನನ್ನ ವಿರುದ್ಧ ಡಿನೋಟಿಫೈ ಬಗ್ಗೆ ಹಾಕಲಾಗಿದ್ದ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನನ್ನ ವಿರುದ್ಧ 100 ಎಫ್‌ಐಆರ್ ದಾಖಲಾದರೂ ಅರ್ಕಾವತಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.