ಜಮಖಂಡಿ: ಎಪಿಎಲ್ ಕಾರ್ಡ್ ಕೇವಲ ವಿಳಾಸದ ದಾಖಲೆಗೆ ಎಂದು ಕೊರಗಬೇಕಿಲ್ಲ. ಅವರಿಗೂ ಶೀಘ್ರವೇ ಕೆಜಿ ರು. 1 ದರದಲ್ಲಿ ಅಕ್ಕಿ, ಗೋದಿ ಸಿಗಲಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಇಂತಹದ್ದೊಂದು ಸೂಚನೆ ನೀಡಿದ್ದಾರೆ. ತಾಲೂಕಿನ ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿಗೆ ರೈತರೇ ಖಾಸಗಿಯಾ ಗಿ ನಿರ್ಮಿಸಿರುವ ಬ್ಯಾರೇಜ್ ನ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಶೇ. 26ರಷ್ಟು ಜನರಿಗೆ ಒಪ್ಪತ್ತಿನ ಕೂಳಿಗೂ ಗತಿ ಇಲ್ಲ. ಇದನ್ನು ಆಧರಿಸಿ ಹಸಿವುಮುಕ್ತ ರಾಜ್ಯವನ್ನಾಗಿಸುವ ಉದ್ದೇಶದಿಂದ ನಾಲ್ಕುವರೆ ಸಾವಿರ ಕೋಟಿ ರುಪಾಯಿ ಆರ್ಥಿಕ ಹೊರೆಯಾ ದರೂ ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ನೀಡಲಾಗುತ್ತಿದೆ. ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಸಾಮಾಜಿಕ, ಆರ್ಥಿಕವಾಗಿ ಸಬಲತೆ ಕೊಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಸ್ನೇಹವಿದ್ದಲ್ಲಿ ಮುನಿಸು ಸಹಜ
ಎಲ್ಲಿ ಹೆಚ್ಚು ಸ್ನೇಹ ಇರುತ್ತದೆಯೋ ಅಲ್ಲಿ ಸ್ವಾಭಾವಿಕವಾಗಿ ಮುನಿಸೂ ಸಹ ಇರುತ್ತದೆ. ಸ್ನೇಹ ಜಾಸ್ತಿ ಇರುವಾಗ ಮುನಿಸುಸಹಜ. ಇದು ಸಚಿವ ಸತೀಶ ಜಾರಕಿಹೊಳಿ ಅವರ ರಾಜಿನಾಮೆ, ವಾಪಸ್ ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಒಂದು ವಾಕ್ಯದ ಪ್ರತಿಕ್ರಿಯೆ . ಖಾತೆ ವಿಚಾರ ಇಲ್ಲಿ ಹೇಳುವುದಿಲ್ಲ ಎಂದು ನುಡಿದರು.
ಆರ್ಥಿಕ ಸ್ಥಿತಿ ಸದೃಢ
ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದ್ದು, ಸಂಪನ್ಮೂಲ ಕ್ರೋಡೀಕರಣ ಸಹ ನಿರೀಕ್ಷಿತ ಪ್ರಮಾಣದಲ್ಲಿದೆ. ಈ ಬಗ್ಗೆ ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಾರ್ಚ್ ನಲ್ಲಿ ಬಜೆಟ್ ಮಂಡನೆಗೆ ಪೂರ್ವ ತಯಾರಿ ನಡೆಸಲಾಗುತ್ತಿದೆ. ಹೊಸ ಯೋಜನೆಗಳ ಪ್ರಕಟಿಸುವುದರ ಕುರಿತು ಸಚಿವರು ಹಾಗೂ ಅದಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.
ಜತೆಗಿದ್ದರೂ ಅಂತರ ನಿರಂತರ
ಬಾಗಲಕೋಟೆ: ಪರಸ್ಪರ ಮುನಿಸಿಕೊಂಡಿದ್ದ ಸಚಿವ ಸತೀಶ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್‍ನಲ್ಲಿ ನಗರಕ್ಕೆ ಒಟ್ಟಿಗೆ
ಆಗಮಿಸಿ, ಬಳಿಕ ಒಂದೇ ಕಾರಿನಲ್ಲಿ ಚಿಕ್ಕಪಡಸಲಗಿಗೆ ಆಗಮಿಸಿದರು.ಏನೂ ಆಗೇ ಇಲ್ಲವೋ ಎಂಬಂತೆ ಇದ್ದರು. ಆದರೆ ಸತೀಶ ಮುಖದಲ್ಲಿ ಮುನಿಸು ಮಾಯವಾಗಿರಲಿಲ್ಲ.