ಜನಪರ ಕೆಲಸ ಮಾಡಿ ಜೈಲಿಗೆ ಹೋಗಿದ್ರಾ: ಬಿಎಸ್ ವೈ ವಿರುದ್ಧ ಸಿಎಂ ಸಿದ್ದು ಕಿಡಿ
ಯಡಿಯೂರಪ್ಪ ಪ್ರಜಾಪ್ರಭುತ್ವದ ರೀತಿ ಆಡಳಿತ ನಡೆಸಿದ್ದರೆ ಜೈಲಿಗೆ ಹೋಗುವ ಪರಿಸ್ಥಿತಿಯೇ ಎದುರಾಗುತ್ತಿರಲಿಲ್ಲ. ಮೊದಲು ಅವರು ಈ ಪ್ರಶ್ನೆಗೆ ಉತ್ತರಿಸಲಿ...
ಮೈಸೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ಬಿಎಸ್ ಯಡಿಯೂರಪ್ಪ ಅವರ ವಾಗ್ದಾಳಿ ಮುಂದುವರೆದಿರುವಂತೆಯೇ, ಅವರಿಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಜನಪರ ಕೆಲಸ ಮಾಡಿ ಜೈಲಿಗೆ ಹೋಗಿದ್ದರೇ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ ತಂದಿದೆ ಇರುಸು-ಮುರುಸು ತಂದಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. "ಯಡಿಯೂರಪ್ಪ ಪ್ರಜಾಪ್ರಭುತ್ವದ ರೀತಿ ಆಡಳಿತ ನಡೆಸಿದ್ದರೆ ಜೈಲಿಗೆ ಹೋಗುವ ಪರಿಸ್ಥಿತಿಯೇ ಎದುರಾಗುತ್ತಿರಲಿಲ್ಲ. ಮೊದಲು ಅವರು ಈ ಪ್ರಶ್ನೆಗೆ ಉತ್ತರಿಸಲಿ. ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತಿತರ ಆರೋಪಗಳಡಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅಧಿಕಾರ ಕಳೆದುಕೊಂಡ ಬಳಿಕ ಯಡಿಯೂರಪ್ಪ ಹತಾಶರಾಗಿದ್ದಾರೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
"ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರಿಯಾಗಿ ಆಡಳಿತ ನಿರ್ವಹಿಸದೆ, ಜೈಲಿಗೆ ಹೋಗಿಬಂದಿದ್ದಾರೆ. ಅಂತಹವರಿಂದ ನೈತಿಕತೆಯ ಪಾಠ ಹೇಳಿಸಿಕೊಳ್ಳುವ ಅಗತ್ಯತೆ
ತಮಗಿಲ್ಲ. ರಾಜ್ಯ ಸರ್ಕಾರ ಸಾಲದ ಸುಳಿಗೆ ಸಿಲುಕಿದೆ ಎಂದು ಯಡಿಯೂರಪ್ಪ ಆರೋಪ ಮಾಡಿದ್ದಾರೆ. ಅದು ಸತ್ಯಕ್ಕೆ ದೂರವಾದ ಸಂಗತಿ ಎಂದರು. ಅಂತೆಯೇ ರಾಜ್ಯ ಸರ್ಕಾರ ಮಿತಿ ಮೀರಿ ಸಾಲ ಮಾಡಿ ಜನರ ತಲೆ ಮೇಲೆ ಋಣಭಾರ ಹೆಚ್ಚಿಸಿದೆ ಎಂಬ ಯಡಿಯೂರಪ್ಪ ಆರೋಪಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ನಮ್ಮ ಇತಿ-ಮಿತಿ ಅರ್ಹತೆಗಳಿಗೆ ತಕ್ಕಂತೆ ಸಾಲ ಮಾಡಿದ್ದೇವೆ. ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಎಂಬುದು ನಮಗೆ ತಿಳಿದಿದೆ ಎಂದು ತಿರುಗೇಟು ನೀಡಿದರು.
ಇದೇ ವೇಳೆ ನಿಗಮ ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ಪಟ್ಟಿ ಸಿದ್ಧಗೊಂಡರೆ ಈ ತಿಂಗಳ ಅಂತ್ಯದೊಳಗೆ ಪ್ರಕಟಿಸಲಾಗುವುದು. ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ಅವಕಾಶ ಸಿಕ್ಕರೆ ಪಕ್ಷದ ಹೈಕಮಾಂಡ್ ಜತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ದೆಹಲಿಯಿಂದ ಬಂದ ಬಳಿಕ ಸಂಪುಟ ವಿಸ್ತರಣೆಗೆ ಉತ್ತರ
ಇನ್ನು ರಾಜ್ಯದಲ್ಲಿ ಹಲವು ದಿನಗಳಿಂದ ಚರ್ಚೆಯಾಗುತ್ತಿರುವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಸಚಿವ ಸಂಪುಟದಲ್ಲಿ ಯಾರು ಇರುತ್ತಾರೆ? ಅಥವಾ ಯಾರು ಇರುವುದಿಲ್ಲ ಎನ್ನುವ ಪ್ರಶ್ನೆಗೆ ದೆಹಲಿಯಿಂದ ಬಂದ ನಂತರ ಉತ್ತರ ನೀಡುವುದಾಗಿ ಹೇಳಿದರು.