ಪಣಜಿ: ಗೋವಾ ಪುರಸಭೆಗೆ ಆಯ್ಕೆಯಾದ ಬಿಜೆಪಿ ಸದಸ್ಯನೊಬ್ಬನಿಗೆ ಆತನ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿರುವುದು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕಾನಕಾನ ಪುರಸಭೆಯ ವಾರ್ಡ್.3 ರಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಕಿಶೋರ್ ಶೇಟ್ ಅವರನ್ನು ಮಲ್ಲಿಕಾರ್ಜುನ ದೇವಾಲಯದಲ್ಲಿ ಕುರ್ಚಿ ಮೇಲೆ ಕೂರಿಸಿ ಹಾಲಿನ ಅಭಿಷೇಕ ಮಾಡುತ್ತಿರುವ ದೃಶ್ಯ ಬಹಿರಂಗವಾಗಿದೆ. ಕಾರ್ಪೊರೇಟರ್ ಗೆ ಹಾಲಿನ ಅಭಿಷೇಕ ಮಾಡಿರುವುದರ ಬಗ್ಗೆ ಆಕ್ರೋಶಗೊಂದಿರುವ ಕಾಂಗ್ರೆಸ್, ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾಮಾನ್ಯ ಜನರು ಹಲವು ಸಂದರ್ಭಗಳಲ್ಲಿ ಹಾಲನ್ನು ಖರೀದಿಸುವುದಕ್ಕೇ ಸಂಕಷ್ಟ ಎದುರಿಸಿರುತ್ತಾರೆ. ಓರ್ವ ಜನಪ್ರತಿನಿಧಿ ಹಾಲನ್ನು ವ್ಯರ್ಥ ಮಾಡುತ್ತಿರುವುದು ಬಿಜೆಪಿ ಸಂವೇದನಾರಹಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದೆ.
ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಶೇಟ್, ತಮ್ಮ ಬೆಂಬಲಿಗರು ಭಾರತೀಯ ಸಂಪ್ರದಾಯವನ್ನಷ್ಟೇ ಪಾಲಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. " ನಾನು ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದಕ್ಕೆ ಸಂತೋಷಗೊಂಡಿರುವ ಬೆಂಬಲಿಗರು ಭಾರತದ ಪ್ರಸಿದ್ಧ ಸಂಪ್ರದಾಯವಾದ ಹಾಲಿನ ಅಭಿಷೇಕ ಮಾಡಿದ್ದಾರೆ ಎಂದು ಕಿಶೋರ್ ಶೇಟ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋವಾ ಬಿಜೆಪಿ ಉಪಾಧ್ಯಕ್ಷ ದೇವರನ್ನು ಮೆಚ್ಚಿಸಲು ಈ ರೀತಿ ಮಾಡಿದ್ದಾಗಿ ಶೇಟ್ ತಿಳಿಸಿದ್ದಾರೆ. ಆದರೆ ಈ ಆಚರಣೆಯಿಂದ ನಿಜವಾಗಿಯೂ ದೇವರು ತೃಪ್ತಿಗೊಂಡಿರುವ ಬಗ್ಗೆ ಖಾತ್ರಿ ಇಲ್ಲ ಎಂದು ಹೇಳಿದ್ದಾರೆ.