ರಾಜಕೀಯ

ಸಮರ್ಥನೆಗೆ ಬನ್ನಿ: ಸಿಎಂ ಹುಕುಂ

Srinivasamurthy VN

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿವೇಶನದ ವೇಳೆ ಚರ್ಚೆ ನಡೆಯುವ ಸಂದರ್ಭದಲ್ಲಿ ಸದನದಲ್ಲಿ ಖುದ್ದು ಹಾಜರಿದ್ದು ವಿಪಕ್ಷಗಳ ಟೀಕೆ ಸಂದರ್ಭದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.  ಗುರುವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಅವರು ಬರಗಾಲ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯುವಾಗ  ಸದನದಲ್ಲಿ ಸಚಿವರೇ ಹಾಜರಿರುವುದಿಲ್ಲ, ಪ್ರಶ್ನೋತ್ತರ ಇಲ್ಲವೇ ತಮ್ಮ ಇಲಾಖೆಗಳ ವಿಷಯ ಬಂದಾಗ ಉತ್ತರಿಸಿ ಸದನದಿಂದ ಹೊರಟು ಹೋಗುತ್ತಿದ್ದೀರಿ, ಇದರಿಂದ ಸದನಕ್ಕೂ ಗೌರವ ಬರುತ್ತಿಲ್ಲ, ಸರ್ಕಾರದ ವರ್ಚಸ್ಸಿಗೂ ಧಕ್ಕೆ ಆಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರೆಂದು ಮೂಲಗಳು ತಿಳಿಸಿವೆ.

ಇನ್ನು ಚರ್ಚೆಯ ವೇಳೆ ವಿಪಕ್ಷಗಳಿಗೆ ಸಮರ್ಥವಾಗಿ ಉತ್ತರ ನೀಡುತ್ತಿಲ್ಲ. ಉತ್ತರ ಕೊಡುವಾಗಲೂ ಸ್ಪಷ್ಟತೆಯೂ ಇರುವುದಿಲ್ಲ. ಬಹುತೇಕರು ತಡಬಡಾಯಿಸುತ್ತಾರೆ. ಇದರಿಂದ ಕೆಲವೊಮ್ಮೆ  ಹಾಸ್ಯಾಸ್ಪದಕ್ಕೆ ಗುರಿ ಆಗಬೇಕಾಗುತ್ತಿದೆ. ಇದು ಮರುಕಳಿಸದಂತೆ ಎಚ್ಚರಿಕೆವಹಿಸಬೇಕೆಂದು ಕಿವಿಮಾತು ಹೇಳಿರುವ ಮುಖ್ಯಮಂತ್ರಿ, ಅಧಿವೇಶನ ನಡೆಯುವ ಸಂದರ್ಭದಲ್ಲಿ ಎಲ್ಲಾ ಖಾಸಗಿ  ಕಾರ್ಯಕ್ರಮ ರದ್ದುಪಡಿಸಬೇಕು ಜತೆಗೆ ಆ ಸಮಯದಲ್ಲಿ ಅಧಿವೇಶನದಲ್ಲಿ ಹಾಜರಿರಬೇಕೆಂದು ಸೂಚಿಸಿದ್ದಾರೆ.

ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು
ಕೃಷಿ, ವಾಣಿಜ್ಯ ಹಾಗೂ ಆಹಾರ ಸಂಸ್ಕರಣೆ ನೀತಿಗೆ ಅನುಮೋದನೆ
ಕೈಮಗ್ಗ ಅಭಿವೃದ್ಧಿ ನಿಗಮ ಬ್ಯಾಂಕ್‍ಗಳ ಒಕ್ಕೂಟದಿಂದ ಪಡೆದಿರುವ 27 ಕೋ. ಸಾಲಕ್ಕೆ ಖಾತರಿ ವಿಸ್ತರಣೆ
300 ಹೆದ್ದಾರಿ ಗಸ್ತು ವಾಹನ ಖರೀದಿಗೆ 45 ಕೋ.ಅನುದಾನ
 ನಾರಾಯಣಪುರ ಎಡದಂಡೆ ಕಾಲುವೆ, ಕಾಲುವೆ ಜಾಲದ ವಿಸ್ತರಣೆ,  ನವೀಕರಣಕ್ಕೆ 4,233 ಕೋ.ಮೊತ್ತದ ಕಾಮಗಾರಿಗೆ ಅನುಮೋದನೆ
ಚಿತ್ರದುರ್ಗದ ಮುರುಘಮಠದ ಆವರಣದಲ್ಲಿ ಬಸವಣ್ಣನವರ 325 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ 10 ಕೋ. ಅನುದಾನ

SCROLL FOR NEXT