ರಾಜಕೀಯ

ಸಮಯದ ಅಭಾವ, ರಾಹುಲ್ ಗಾಂಧಿಯಿಂದ ಮೃತ ರೈತರ ಕುಟುಂಬಕ್ಕೆ ಸಾಮೂಹಿಕ ಸಾಂತ್ವನ

Lingaraj Badiger

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಕ್ಟೋಬರ್ 9 ಮತ್ತು 10ರಂದು ರಾಜ್ಯಕ್ಕೆ ಆಗಮಿಸುವುದು ಖಚಿತವಾಗಿದೆ. ಆದರೆ ಸಮಯದ ಅಭಾವದಿಂದಾಗಿ ಮೃತ ರೈತರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು, ಆತ್ಮಹತ್ಯೆಗೆ ಶರಣಾದ ಎಲ್ಲಾ ರೈತರ ಕುಟುಂಬವನ್ನು ಒಂದೆಡೆ ಸೇರಿಸಿ, ಸಾಮೂಹಿಕ ಸಾಂತ್ವನ ಹೇಳುತ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 57 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಈ ಎಲ್ಲಾ ರೈತರ ಕುಟುಂಬದವರನ್ನು ಮಂಡ್ಯದ ವಿಸಿ ಫಾರ್ಮ್‌ನಲ್ಲಿ ಸೇರಿಸಲಾಗುತ್ತಿದೆ. ಶುಕ್ರವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ರಾಹುಲ್ ಗಾಂಧಿ ನೇರವಾಗಿ ಮಂಡ್ಯಗೆ ತೆರಳಿ ಮೃತ ರೈತರ ಕುಟುಂಬದೊಂದಿಗೆ ಸಂವಾದ ನಡೆಸಲಿದ್ದಾರೆ.

ಈ ವೇಳೆ ರೈತರಲ್ಲಿ ಆತ್ಮ ವಿಶ್ವಾಸ ತುಂಬುವ ಹಾಗೂ ಬರ ಪರಿಸ್ಥಿತಿಯಿಂದ ಹೊರ ಬರಲು ರಾಹುಲ್ ಸಹಾಯ ಮಾಡಲಿದ್ದಾರೆ. ಬಳಿಕ ಬೆಂಗಳೂರಿಗೆ ಆಗಮಿಸುವ ರಾಹುಲ್ ನೂತನ ಬಿಬಿಬಿಎಂಪಿ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲೂ ರಾಹುಲ್ ಭಾಗಿಯಾಗಲಿದ್ದಾರೆ.

ಇನ್ನು ಶನಿವಾರ ಹಾವೇರಿಗೆ ತೆರಳಲಿರುವ ರಾಹುಲ್ ಗಾಂಧಿ, ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಮೈದುರು ಗ್ರಾಮದಿಂದ ರಾಣೆಬೆನ್ನೂರುವರೆಗೆ ಸುಮಾರು 6 ಕಿ.ಮೀಗಳವರೆಗೆ ಪಾದಯಾತ್ರೆ ಮಾಡಲಿದ್ದಾರೆ ಎಂದು ರಾಹುಲ್ ಭೇಟಿಯ ಉಸ್ತುವಾರಿ ವಿಧಾನ ಪರಿಷತ್ ಸದಸ್ಯ ಆರ್.ವಿ.ವೆಂಕಟೇಶ್ ಅವರು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಭೇಟಿ ವೇಳೆ ರಾಜ್ಯ ಕಾಂಗ್ರೆಸ್ ನಾಯಕರು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಲಾ 1 ಲಕ್ಷ ರುಪಾಯಿ ಪರಿಹಾರ ನೀಡಲು ಮುಂದಾಗಿದ್ದಾರೆ.

SCROLL FOR NEXT