ರಾಜಕೀಯ

ಬಿಹಾರ ಚುನಾವಣೆ ಜಂಗಲ್ ರಾಜ್- ವಿಕಾಸ್ ರಾಜ್ ನಡುವಿನ ಸಮರ: ಮೋದಿ

Srinivas Rao BV

ಮುಂಗರ್: ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಜಂಗಲ್ ರಾಜ್ ಹಾಗೂ ವಿಕಾಸ್ ರಾಜ್ ನಡುವಿನ ಸಮರ, ಬಿಹಾರದಲ್ಲಿ ಯಾವುದಿರಬೇಕು ಎಂಬುದನ್ನು ನಿರ್ಧರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದಾರೆ.
ಮುಂಗರ್ ನಲ್ಲಿ ನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ವಿಧಾನಸಭೆ ಚುನಾವಣೆ ವಿಕಾಸಕ್ಕಾಗಿ ನಡೆಯಬೇಕೆ ಹೊರತು ಜಂಗಲ್ ರಾಜ್ ಗಾಗಿ ನಡೆಯಬಾರದು, ಜಂಗಲ್ ರಾಜ್ ನಲ್ಲಿ ಅಪಹರಣವೇ ಪ್ರಮುಖ ಉದ್ಯೋಗವಾಗಿದೆ. ಕಳೆದ 7 ತಿಂಗಳಲ್ಲಿ 4000 ಸಾವಿರ ಜನರನ್ನು ಅಪಹರಣ ಮಾಡಲಾಗಿದೆ. ಬಿಹಾರಕ್ಕೆ ವಿಕಾಸ್ ರಾಜ್ ಬೇಕೋ ಅಥವಾ ಜಂಗಲ್ ರಾಜ್ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ್ದ ಜಯಪ್ರಕಾಶ್ ನಾರಾಯಣ್ ನನಗೆ ಆದರ್ಶ ಎಂದಿರುವ ಪ್ರಧಾನಿ ಮೋದಿ, ಪರೋಕ್ಷವಾಗಿ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಜೆಪಿ ಚಳುವಳಿಯಲ್ಲಿ ಕಾಂಗ್ರೆಸ್ ಗೆ ವಿರುದ್ಧವಾಗಿದ್ದ ಜನತಾ ಪರಿವಾರದ ನಾಯಕರು ಇಂದು ಅಧಿಕಾರಕ್ಕಾಗಿ ಜಯಪ್ರಕಾಶ್ ನಾರಾಯಣ್ ಅವರನ್ನು ಜೈಲಿಗೆ ಕಳಿಸಿದ್ದ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿದ್ದಾರೆ. ಕಳೆದ 60 ವರ್ಷಗಳಿಂದ ಬಿಹಾರವನ್ನು ಲೂಟಿ ಮಾಡಿ ಈಗ ಸ್ವಾರ್ಥಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ರಾಮ್ ಮನೋಹರ್ ಲೋಹಿಯಾ ಸಿದ್ಧಾಂತದ ಬಗ್ಗೆ ಮಾತನಾಡುತ್ತಿದ್ದವರು ಇಂದು ಕಾಂಗ್ರೆಸ್ ನೊಂದಿಗೆ ಸೇರಿ ನಮ್ಮನ್ನು ನಿಂದಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಪ್ರಥಮ ಬಾರಿಗೆ ಬಿಹಾರದಲ್ಲಿ ಅಭಿವೃದ್ಧಿ ಆಧಾರಿತ ಚುನಾವಣೆ ನಡೆಯುತ್ತಿದ್ದು ಅಭಿವೃದ್ಧಿಗೆ ಜನ ಮತ ಹಾಕಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.

SCROLL FOR NEXT