ನವದೆಹಲಿ: ಮಾಜಿ ಸಿಎಂ ಎಸ್.ಎಂ. ಕೃಷ್ಣ ಶುಕ್ರವಾರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕ ಭೇಟಿ ಮಾಡಿ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ.
ಬಿಬಿಎಂಪಿ ಚುನಾವಣೆ, ಪಕ್ಷದ ಮೂಲ ನಿವಾಸಿಗಳು- ವಲಸಿಗರ ನಡುವಿನ ಸಂಘರ್ಷ ರಾಹುಲ್ ಭೇಟಿ ವೇಳೆ ಮಂಡ್ಯದಲ್ಲಿನ ಚೆಕ್ ವಿವಾದ ಬಗ್ಗೆ ಕೃಷ್ಣ ಮಾಹಿತಿ ನೀಡಿದರು. ಸಂಪುಟ ವಿಸ್ತರಣೆ ಕುರಿತಂತೆ ಕೃಷ್ಣ ಅವರು ಸೋನಿಯಾಗೆ ವಿವರಣೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ನಿಯೋಜಿಸಬಹುದಾದ ಸಚಿವರು ಮತ್ತು ಇದುವರೆಗೆ ಪಕ್ಷ ಸಂಘಟನೆ ಮಾಡಿದ ಮತ್ತು ಸಚಿವ ಸ್ಥಾನಕ್ಕೆ ಅರ್ಹರಾದವರ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ.
ಬೆಳಿಗ್ಗೆ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು ೩೦ ನಿಮಿಷ ಕಾಲ ಕೃಷ್ಣ ಚರ್ಚಿಸಿದರು. ನಂತರ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು ೨೫ ನಿಮಿಷ ಚರ್ಚಿಸಿದರು. ಚರ್ಚೆಯ ವೇಳೆ ಮಂಡ್ಯ ಜಿಯಲ್ಲಿ ಕಾಂಗ್ರೆಸ್‌ನ ಗುಂಪುಗಾರಿಕೆ ಮತ್ತು ಲೋಕಸಭಾ ಮಾಜಿ ಸದಸ್ಯೆ ರಮ್ಯ ಅವರನ್ನು ಒಂದು ಗುಂಪು ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿರುವ ಬಗ್ಗೆಯೂ ಗಮನ ಸೆಳೆದರು. ಜತೆಗೆ ಲೋಕಸಭೆಯಲ್ಲಿ ಅತಿ ಕಡಿಮೆ ಅಂತರದಲ್ಲಿ ಸೋತಿರುವ ರಮ್ಯಾ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕು ಮತ್ತು ಪಕ್ಷ ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳಲು ಹೆಚ್ಚಿನ ಜವಾಬ್ದಾರಿ ನೀಡಬೇಕು. ಯುವ ಸಮುದಾಯ ಸಂಘಟಿಸಲು ಇದರಿಂದ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ಸಲಹೆ ನೀಡಿದರು. ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಯಲ್ಲಿ ನಮ್ಮ ಪಾತ್ರವೇನೂ ಇಲ್ಲ.
ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರ ಪ್ರತಿನಿಧಿಸುವ ಸಚಿವರ ಅತಿಯಾದ ಆತ್ಮವಿಶ್ವಾಸವೇ ಹಿನ್ನಡೆಗೆ ಕಾರಣವಾಯ್ತು, ಬಿಬಿಎಂಪಿ ಚುನಾವಣೆಯು ಪಕ್ಷದ ಬಗ್ಗೆ ರಾಜ್ಯದ ಜನತೆಗಿರುವ ಇಷ್ಟಾನಿಷ್ಟದ ಪ್ರತಿಬಿಂಬ ಎಂದು ವಿವರಿಸಿದ್ದಾರೆ. ಪಕ್ಷದಲ್ಲಿ ಮೂಲ ನಿವಾಸಿಗಳು ಮತ್ತು ವಲಸಿಗರ ನಡುವೆ ಭಿನ್ನಾಭಿಪ್ರಾಯ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಕಾರ್ಯಕರ್ತರ ವಿಷಯದಲ್ಲಿ ಹೃದಯವೈಶಾಲ್ಯತೆ ಮೆರೆಯಬೇಕು. ಆ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ನಡೆಯುವಂತೆ ನಿರ್ದೆಶನ ನೀಡುವುದು ಒಳಿತು ಎಂದು ಸಲಹೆ ನೀಡಿದ್ದಾರೆನ್ನಲಾಗಿದೆ. ಗುರುವಾರ ತಡರಾತ್ರಿ ಅವರು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಎಂ ಬಿ ಪಾಟೀಲ ಭೇಟಿ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ್ದರು.ಸುಮಾರು ಹತ್ತು ನಿಮಿಷ ಕಾಲ ಭೇಟಿ ಮಾಡಿದ್ದ ಅವರು ಇದು ಔಪಚಾರಿಕ ಭೇಟಿ, ಯಾವ ರಾಜಕೀಯ ಉದ್ದೇಶವೂ ಇಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.