ನವದೆಹಲಿ: ದಾದ್ರಿ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ಆರ್ ಎಸ್ಎಸ್ ಮುಖಾವಾಣಿಯ ಕ್ರಮ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಗೋಹತ್ಯೆ ಬಗ್ಗೆ ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಎರಡನೇ ಹಂತದ ಬಿಜೆಪಿ ನಾಯಕರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೊಟೀಸ್ ಜಾರಿ ಮಾಡಿರುವ ವೇಳೆಯಲ್ಲೇ ದಾದ್ರಿ ಪ್ರಕರಣ, ಗೋಹತ್ಯೆ ಮಾಡಿದವರನ್ನು ಶಿಕ್ಷಿಸುವ ಕ್ರಮವನ್ನು ಆರ್ ಎಸ್ಎಸ್ ಸಮರ್ಥಿಸಿಕೊಂಡಿರುವುದು ಬಿಜೆಪಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಆರ್ ಎಸ್ಎಸ್ ಮುಖವಾಣಿ ನಿಲುವನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಗೋಹತ್ಯೆ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಸಚಿವ ಮಹೇಶ್ ಶರ್ಮಾ, ಬಿಜೆಪಿ ಮುಖಂಡ ಮತ್ತು ಸಂಸದ ಸಾಕ್ಷಿ ಮಹಾರಾಜ್ ಮತ್ತು ಸಂಗೀತ್ ಸೋಮ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಮನ್ಸ್ ಜಾರಿ ಮಾಡಿದ್ದಾರೆ. ಇದೇ ರೀತಿ ದಾದ್ರಿ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ಆರ್ ಎಸ್ಎಸ್ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೂ ಸಮನ್ಸ್ ನೀಡುತ್ತೀರಾ? ಎಂದು ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದಾರೆ.
ಗೋಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ, ಭಾನುವಾರ ಬಿಜೆಪಿ ಹೈಕಮಾಂಡ್ ನಾಲ್ಕು ಮುಖಂಡರಿಗೆ ಈಗಾಗಲೇ ಸಮನ್ಸ್ ಜಾರಿ ಮಾಡಿದೆ.