ರಾಜಕೀಯ

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಯಾವುದೇ ಷರತ್ತು ವಿಧಿಸಿಲ್ಲ: ದೇವೇಗೌಡ

Lingaraj Badiger

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಯಾವುದೇ ಷರತ್ತು ವಿಧಿಸಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬುಧವಾರ ಹೇಳಿದ್ದಾರೆ.

ಮೈತ್ರಿಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜೆ.ಪರಮೇಶ್ವರ ಅವರು ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಮೈತ್ರಿಗೆ ಯಾವುದೇ ಷರತ್ತು ವಿಧಿಸಿಲ್ಲ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೇವಲ ಬಿಬಿಎಂಪಿಗೆ ಮಾತ್ರ ಸೀಮಿತ ಎಂದರು.

ಮೈತ್ರಿಯ ಸಾಧಕ ಬಾಧಕಗಳ ಬಗ್ಗೆ ಸಿಎಂ, ಹಾಗೂ ಎಚ್.ಡಿ.ಕುಮಾರಸ್ವಾಮಿಯೊಂದಿಗೆ ಚರ್ಚಿಸಿ ಎಂದು ಪರಮೇಶ್ವರಗೆ ಸಲಹೆ ನೀಡಿದ್ದೇನೆ. ಆದರೆ ಸಿಎಂ ತಮ್ಮನ್ನು ಭೇಟಿಯಾಗುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ 21 ಮತಗಳನ್ನು ಹೊಂದಿದೆ. ಸಂಖ್ಯೆಯನ್ನು ಆಧರಿಸಿ ಜೆಡಿಎಸ್‌ಗೆ ಸ್ಥಾನಮಾನ ದೊರೆಯಲಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯರ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ. ಆದರೆ ಇದು ಷರತ್ತಲ್ಲ. ಸಹಜವಾಗಿಯೇ ಸಿಗುವ ಸ್ಥಾನಮಾನವಷ್ಟೇ ಎಂದು ಮಾಜಿ ಪ್ರಧಾನಿ ಸ್ಪಷ್ಟಪಡಿಸಿದರು.

SCROLL FOR NEXT