ರಾಜಕೀಯ

ಮಹಾದಾಯಿ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮಧ್ಯಸ್ಥಿಕೆಯೊಂದೇ ದಾರಿ: ಸಿಎಂ

Shilpa D

ಬೆಳಗಾವಿ: ಮಹಾದಾಯಿ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.

ದಶಕಗಳಿಂದ ಕಾಡುತ್ತಿರುವ ಮಹಾದಾಯಿ ನದಿ ನೀರು ಹಂತಿಕೆ ಸಮಸ್ಯೆ ಬಗೆಹರಿಸಲು ಸರ್ಕಾರ ಯಾವ್ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದರ ಬಗ್ಗೆ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಸದನದಲ್ಲಿ ವಿವರಣೆ ನೀಡಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಹಾದಾಯಿ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮಧ್ಯಸ್ಥಿಕೆ ಒಂದೇ ದಾರಿ ಎಂದು ಹೇಳಿದರು.

ಕರ್ನಾಟಕ-ಗೋವಾ- ಮಹಾರಾಷ್ಟ್ರ ಸಿಎಂಗಳ ಜೊತೆ ಪ್ರಧಾನಿ  ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕೆಂದು ಮಹದಾಯಿ ನದಿ ನೀರು ಹಂಚಿಕೆ ಮಂಡಳಿ ಸಲಹೆ ನೀಡಿದೆ. ನಾವು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವುದೇ ಸೂಕ್ತ ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಈ ವೇಳೆ ಪ್ರತಿಕ್ರಿಯಿಸಲು ಮುಂದಾದ ಜಗದೀಶ ಶೆಟ್ಟರ್, ‘ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ. ಸೋನಿಯಾಗಾಂಧಿ ಅವರು ಒಂದಾದರೂ ಹೇಳಿಕೆ ನೀಡಿದ್ದಾರಾ? ಕಾಂಗ್ರೆಸ್, ಜೆಡಿಎಸ್ ಎ ಮತ್ತು ಬಿ ಟೀಂ ಇದ್ದಂತೆ ಎಂದರು. ದಶಕಗಳ ಕಾಲ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು, ಆದರೆ ಆ ವೇಳೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕಾಂಗ್ರೆಸ್ ಒಂದು ಬಾರಿಯೂ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸಮಸ್ಯೆ ಬಗೆಹರಿಸಲು ಪ್ರಧಾನಿ ಯವರಿಗೆ ಮನವಿ ಸಲ್ಲಿಸಲು ರಾಜ್ಯ ಬಿಜೆಪಿ ಪ್ರಯತ್ನ ಪಡುತ್ತದೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಹಾದಾಯಿ ನದಿ ನೀರು ಸಮಸ್ಯೆ ಬಗೆಹರಿಸುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ನೀರಿನ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.

SCROLL FOR NEXT