ರಾಜಕೀಯ

ವಿಧಾನಸಭೆ ಚುನಾವಣೆ ಮೇಲೆ ಕಣ್ಣು: ಸಿಎಂ ಇಬ್ರಾಹಿಂ ಗೆ ಜೆಡಿಎಸ್ ಗಾಳ

Shilpa D

ಬೆಂಗಳೂರು: 2018ರ  ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕಾರ್ಯತಂತ್ರ ರೂಪಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ ಕುಮಾರ ಸ್ವಾಮಿ, ಜೆಡಿಎಸ್ ಸೇರಲು ಬಯಸುತ್ತಿರುವ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರಲು ತಯಾರಿ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಪರಮಾಪ್ತ ಹಾಗೂ ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರುವ ಇಂಗಿತ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಜನವರಿ 15ರ ಬಳಿಕ ಇಬ್ರಾಹಿಂ ಜೆಡಿಎಸ್ ಪಾಳಯ ಸೇರಲಿದ್ದಾರೆ ಎನ್ನಲಾಗುತ್ತಿದೆ.

1994 ರಲ್ಲಿ ಸಿಎಂ ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು, ಈ ಚುನಾವಣೆಯಲ್ಲಿ ಗೆದ್ದ ಬಳಿಕ ಎಚ್.ಡಿ ದೇವೇಗೊಡ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ ಸಿಎಂ ಇಬ್ರಾಹಿಂ ಕೇಂದ್ರ ವಿಮಾನ ಯಾನ ಖಾತೆ ಸಚಿವರಾಗಿಯೂ ಅಧಿಕಾರ ಸ್ವೀಕರಿಸಿದ್ದರು.

ನಂತರ ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಸಿದ್ದರಾಮಯ್ಯ ಜೊತೆ ಇಬ್ರಾಹಿಂ ಕೂಡ ಕಾಂಗ್ರೆಸ್ ಸೇರ್ಪಡೆಗೊಂಡರು. ಅವರನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರನ್ನಾಗಿ ನೇಮಕ ಮಾಡಲಾಯಿತು.

ಆದರೆ ರಾಜ್ಯ ಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಸ್ಥಾನ ಗಳಿಸುವಲ್ಲಿ ಇಬ್ರಾಹಿಂ ವಿಫಲರಾದರು. ರಾಜ್ಯ ಯೋಜನಾ ಆಯೋಗದ ಉಪಾಧ್ಕ್ಷ ಸ್ಥಾನ ಕೆಲಸಕ್ಕೆ ಬಾರದ ಡಮ್ಮಿ ಹುದ್ದೆಯಾಗಿತ್ತು.

ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪರ್ಯಯಾವಾಗಿ ಜೆಡಿಎಸ್ ಪಕ್ಷವನ್ನು ಕಟ್ಟಬೇಕು ಎಂದು ನಿರ್ಧರಿಸಿರುವ ಜೆಡಿಎಸ್ ಪಕ್ಷದ ಹಲವು ಹುದ್ದೆಗಳಿಗೆ ಹೊಸಬರನ್ನು ನೇಮಿಸಿದೆ. ಹೀಗಾಗಿ ಪಕ್ಷ ತೊರೆದಿರುವ ಹಲವು ನಾಯಕರನ್ನು ಮತ್ತೆ ಜೆಡಿಎಸ್ ಗೆ ಕರೆ ತರಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಿವೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಪಕ್ಷದಿಂದ ದೂರವಾದ ಬಳಿಕ ಇಬ್ರಾಹಿಂ ಜೆಡಿಎಸ್ ಗೆ , ದೇವೇಗೌಡರಿಗೆ ಬಹಳ ಹತ್ತಿರವಾಗಿದ್ದರು. ಇತ್ತೀಚೆಗೆ ದೇವೇಗೌಡರು ವಿಧಾನಸೌಧದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದಾಗಲೂ ಮೊದಲು ಓಡೋಡಿ ಬಂದಿದ್ದ ಇಬ್ರಾಹಿಂ, ಬಳಿಕ ಗೌಡರ ಮನೆಗೂ ತೆರಳಿ ಆರೋಗ್ಯ ವಿಚಾರಿಸಿದ್ದರು. ಇದೀಗ ಜಮೀರ್ ಅಹಮದ್ ಸ್ಥಾನ ತುಂಬಲು ಇಬ್ರಾಹಿಂ ಸೂಕ್ತ ಎನ್ನುವುದನ್ನು ಮನಗಂಡಿರುವ ದೇವೇಗೌಡರು, ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕತೆ ಹೊಂದಿದ್ದು, ಇಬ್ರಾಹಿಂ ಕೂಡಾ ಪಕ್ಷಕ್ಕೆ ಮರಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಮೆರಿಕಾ ಪ್ರವಾಸದಲ್ಲಿರುವ ಕುಮಾರಸ್ವಾಮಿ ರಾಜ್ಯಕ್ಕೆ ವಾಪಸಾದ ನಂತರ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

SCROLL FOR NEXT