ಬೆಂಗಳೂರು: ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮ ನಾಮಪತ್ರ ಹಿಂಪಡೆಯಲಿಲ್ಲ ಎಂಬ ಕಾರಣದಿಂದ ಅಭ್ಯರ್ಥಿಯ ಪತಿಯನ್ನೇ ಅಪಹರಣ ಮಾಡಿದ ಘಟನೆ ಬೆಂಗಳೂರಿನ ಕುಂಬಳಗೂಡಿನಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ರಾಮಸಂದ್ರ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಅಭ್ಯರ್ಥಿ ಮಮತಾ ಅವರ ಪತಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದು, ಅಪಹರಣಕಾರರಿಂದ ಮಮತಾ ಅವರ ಪತಿ ಅಪ್ಪಾಜಿಗೌಡ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಅಹಪರಣಕಾರರ ವಿರುದ್ಧ ಅಪ್ಪಾಜಿಗೌಡ ಅವರು ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತರೆ ಪಕ್ಷದ ಮುಖಂಡರಾದ ನರಹರಿ ಹಾಗೂ ಪ್ರಭು ಎಂಬುವವರು ಮಮತಾ ಅವರು ತಮ್ಮ ನಾಮಪತ್ರವನ್ನು ಹಿಂಪಡೆಯುವಂತೆ ಬೆದರಿಕೆ ಒಡ್ಡಿದ್ದರು. ಇದಕ್ಕೆ ತಾವು ಬಗ್ಗದ ಹಿನ್ನಲೆಯಲ್ಲಿ ನನ್ನನ್ನು ಅಪಹರಣ ಮಾಡಿದ್ದರು. ನಿನ್ನೆ ಬೋರನಹಳ್ಳಿಯಿಂದ ಅಪಹರಣ ಮಾಡಿದ್ದ ಅಪಹರಣಕಾರರು ತಮ್ಮನ್ನ, ಬೆಂಗಳೂರಿನ ವಿಜಯನಗರದಲ್ಲಿರುವ ರವಿ ಎನ್ನುವವರ ಮಾಲೀಕತ್ವದ ರಾಷ್ಟ್ರಕೂಟ ಡೆವಲಪರ್ಸ್ನಲ್ಲಿ ಕೂಡಿ ಹಾಕಿದ್ರು. ಅಲ್ಲದೆ ಗೋವಾಕ್ಕೆ ಕರೆದೊಯ್ಯಲು ಟಿಕೆಟ್ ಕೂಡ ಬುಕ್ ಮಾಡಿದ್ರು. ಆದ್ರೆ, ನಾನು ಅವರಿಂದ ತಪ್ಪಿಸಿಕೊಂಡು ಬಂದೆ ಅಂತ ನಾಗರಾಜ್ ಅಪ್ಪಾಜಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು, ನಾಗರಾಜ್ ಅಪ್ಪಾಜಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡುವಾಗ, ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಕೂಡ ಉಪಸ್ಥಿತರಿದ್ದರು.