ಮಂಗಳೂರು: ಎತ್ತಿನ ಹೊಳೆ ಯೋಜಯ ಕುರಿತು ಚೆನ್ನೈನ ಹಸಿರು ಪೀಠ ಶುಕ್ರವಾರ ತೀರ್ಪು ನೀಡಿದ ಬಳಿಕ ಭಾರಿ ಗೊಂದಲ ಸೃಷ್ಟಿಸಲಾಗುತ್ತಿದ್ದು, ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಜನತೆಯ ಸಂಶಯ ನಿವಾರಣೆ ಮಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನೊಳಗೊಂಡ ವಿಚಾರಣಾ ಆಯೋಗವನ್ನು ರಚಿಸಿ, ತನಿಖೆ ನಡೆಸಬೇಕು ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಇರುವ ತಡೆಯಾಜ್ಞೆಯನ್ನು ಹಸಿರು ಪೀಠ ತೆರವು ಮಾಡಿದೆ. ಕೇವಲ ಒಂದು ಹೆಕ್ಟೇರ್ ಪ್ರದೇಶವನ್ನು ಹೊರತು ಪಡಿಸಿ ಯೋಜಯ ಎಲ್ಲ ಕಾಮಗಾರಿಗಳನ್ನು ನಡೆಸಲು ಹಸಿರು ಪೀಠದ ಆಕ್ಷೇಪ ಇಲ್ಲ’ ಎಂದು ಸರ್ಕಾರದ ಅಡ್ವಕೇಟ್ ಜನರಲ್ ಹೇಳಿದ್ದಾರೆ. ಆದರೆ, ಪರಿಸರ ಹೋರಾಟಗಾರರ ವಕೀಲರು ಹೇಳುವ ಪ್ರಕಾರ, ‘ಜ.೨೭ರವರೆಗೆ ಯೋಜನೆಯ ಕಾಮಗಾರಿಗೆ ಹಸಿರು ಪೀಠವು ತಡೆಯeಯನ್ನು ವಿಸ್ತರಿಸಿದೆ. ಈ ಕುರಿತ ವಿಚಾರಣೆ ಜ.೨೭ರಂದು ನಡೆಯಲಿದೆ’. ಈ ಎರಡು ವಾದಗಳಲ್ಲಿ ಜನತೆ ಯಾರನ್ನು ನಂಬುವುದು? ಈ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಕೂಡಲೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನೊಳಗೊಂಡ ವಿಚಾರಣಾ ಆಯೋಗವನ್ನು ರಚಿಸಿ ರಾಜ್ಯದ ಜನತೆಯ ಎದುರು ವಿಚಾರಗಳನ್ನು ತೆರೆದಿಡಬೇಕು ಎಂದರು.
ಸಿಎಂರನ್ನು ಕ್ಷಮಿಸಲ್ಲ: ಎತ್ತಿನಹೊಳೆ ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಮೋಸ, ಫೋರ್ಜರಿ ಆಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 463, 464, 468ರ ವಿರುದ್ಧ ಎಲ್ಲ ರೀತಿಯ ಅಪರಾಧಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿವೆ. ಆದರೆ, ಸರ್ಕಾರ ಹಾಗೂ ಸ್ವತಃ ಮುಖ್ಯಮಂತ್ರಿಗಳೇ ವ್ಯತಿರಿಕ್ತ ಮಾಹಿತಿಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳೇ, ಇದಕ್ಕೆ ಪರಿಹಾರ ಏನು? ಎಲ್ಲ ಆರೋಪಗಳು ಮೇಲ್ನೋಟದಲ್ಲೇ ಸಾಬೀತಾಗುತ್ತಿರುವಾಗ ಜನರ ಸಂಶಯವನ್ನು ನಿವಾರಣೆ ಮಾಡುವುದು ನಿಮ್ಮ ಕರ್ತವ್ಯ ಅಲ್ಲವೇ? ಈ ಕರ್ತವ್ಯವನ್ನು ನೀವು ನಿರ್ವಹಿಸದಿದ್ದರೆ ಜನತೆ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಪೂಜಾರಿ ಗುಡುಗಿದರು.
ಯಾರಿದ್ದಾರೆ?: ಮುಖ್ಯಮಂತ್ರಿಗಳೇ, ನಿಮಗೆ ಈಗ ಸುವರ್ಣಾವಕಾಶ ಒದಗಿದೆ. ವಿಚಾರಣಾ ಆಯೋಗವನ್ನು ರಚನೆ ಮಾಡಿ, ಕರ್ನಾಟಕದಲ್ಲಿ ಇಂಥ ಮುಖ್ಯಮಂತ್ರಿ ಈ ಹಿಂದೆ ಬಂದಿಲ್ಲ ಎನ್ನುವುದನ್ನು ಸಾಬೀತು ಮಾಡಿ ತೋರಿಸಿ. ಯೋಜನೆಯಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ? ಯಾವ ಗುತ್ತಿಗೆದಾರರು ಈ ಕುತಂತ್ರದ ಹಿಂದಿದ್ದಾರೆ? ಯೋಜನೆಯನ್ನು ಜಾರಿಗೊಳಿಸಲೇ ಬೇಕು ಎನ್ನುವ ಹಠದಲ್ಲಿ ಅವರ ಪಾತ್ರವೇನು? ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ ಮತ್ತು ವೀರಪ್ಪ ಮೊಯ್ಲಿ ಅವರ ಪಾತ್ರವೇನು ಎನ್ನುವ ಸತ್ಯವನ್ನು ಜನರಿಗೆ ತಿಳಿಯಪಡಿಸುವ ಕೆಲಸ ಮಾಡಿ.
ಬುದ್ಧಿ ಇರಲಿಲ್ಲವೇ?
ಸದಾನಂದ ಗೌಡರೇ, ನೀವು ಎತ್ತಿನಹೊಳೆ ಯೋಜನೆಗೆ ಅನುಮೋದನೆ ನೀಡುವಾಗ ಈ ಕುರಿತು ಯಾವ ಅಧ್ಯಯನವನ್ನು ನಡೆಸಿದ್ದೀರಿ ಎನ್ನುವುದನ್ನು ತಿಳಿಸಿ. ಆಗ ನಿಮಗೆ ಬುದ್ಧಿ ಇರಲಿ ಲ್ಲವೇ? ಜನರ ಹಿತವನ್ನು ನಗಣ್ಯಗೊಳಿಸಿ ಕಣ್ಣು ಮುಚ್ಚಿ ಯೋಜನೆಗೆ ಅನುಮೋದನೆ ನೀಡಿದ್ದೀರಿ. ರಾಜ್ಯದ ಜವಾಬ್ದಾರಿ ನಿಮ್ಮ ಮೇಲಿದ್ದಾಗ ಸಂಪುಟ ಅಧ್ಯಯನ ನಡೆಸಬೇಕಾದದ್ದು ನಿಮ್ಮ ಕರ್ತವ್ಯ ಆಗಿರಲಿಲ್ಲವೇ? ಈಗ ನೀವು ಕಾನೂನು ಮಂತ್ರಿಯಾಗಿದ್ದೀರಿ. ಕಾನೂನು ಗೊತ್ತಿದ್ದೂ ಕರಾವಳಿಯ ಅಭಿವೃದ್ಧಿಯನ್ನು ಧ್ವಂಸ ಮಾಡಲು ಏಕೆ ಹೊರಟಿದ್ದೀರಿ'' ಎಂದು ಪೂಜಾರಿ ಪ್ರಶ್ನಿಸಿದರು.