ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ವಿರುದ್ದ ವಿ.ಎಸ್ ಉಗ್ರಪ್ಪ ಅವರು ಪದೇಪದೇ ವಾಗ್ದಾಳಿ ನಡೆಸುತ್ತಿರುವುದು ಆಡಳಿತರೂಢ ಕಾಂಗ್ರೆಸ್ ಪಕ್ಷ ಸೋಮವಾರ ಪೇಚಾಟಕ್ಕೆ ಸಿಲುಕುವಂತೆ ಮಾಡಿತ್ತು.
ಸದನದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯ ವಿ.ಎಸ್.ಉಗ್ರಪ್ಪ ಮತ್ತು ಮೋಟಮ್ಮ ಅವರು ಸಮಾಜ ಕಲ್ಯಾಣ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರಶ್ನಾವಳಿ ಅವಧಿಯಲ್ಲಿ ಮಾತನಾಡಿದ ಮೋಟಮ್ಮ ಅವರು, ದಲಿತರಿಗೆ ಪ್ರತ್ಯೇಕ ಸ್ಮಶಾನ ಪ್ರದೇಶವಿಲ್ಲ ಎಂದು ಹೇಳಿದರು. ಇದಕ್ಕುತ್ತರಿಸಿದ ಆಂಜನೇಯ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಪ್ರತ್ಯೇಕ ಸ್ಮಶಾನ ನಿರ್ಮಾಣ ಮಾಡುವ ಸಲುವಾಗಿ ರು. 40 ಕೋಟಿ ಹಣವನ್ನು ಮಂಜೂರು ಮಾಡಲಾಗಿದ್ದು, ಜಿಲ್ಲಾಧಿಕಾರಿಗೆ ಇದರ ಅಧಿಕಾರವನ್ನು ನೀಡಲಾಗಿದೆ ಎಂದು ಹೇಳಿದರು.
ಆಂಜನೇಯ ಅವರ ಈ ಪ್ರತಿಕ್ರಿಯೆ ವಿರೋಧ ವ್ಯಕ್ತಪಡಿಸಿದ ಉಗ್ರಪ್ಪ ಅವರು, ಸತ್ತಮೇಲೂ ದಲಿತರನ್ನು ಸಮಾನಾಗಿ ನೋಡದೇ ಇರುವುದು ದುರಾದೃಷ್ಟಕರ ಸಂಗತಿ. ದಲಿತರಿಗೆ ಪ್ರತ್ಯೇಕ ಸ್ಮಶಾನ ನಿರ್ಮಾಣ ಮಾಡುವುದು ಸಮುದಾಯಕ್ಕೆ ಮಾಡುವ ಅವಮಾನ. ನೀವು ಸಮುದಾಯವನ್ನು ಬೇರ್ಪಡುಸುತ್ತಿದ್ದೀರಿ ಎಂದರು. ಉಗ್ರಪ್ಪ ಅವರ ಈ ಹೇಳಿಕೆಗೆ ಬಿಜೆಪಿ ನಾಯಕರು ಕೂಡ ಬೆಂಬಲ ವ್ಯಕ್ತಪಡಿಸಿದರು.
ನಂತರ ತಾರಾ ಅನುರಾಧ ಅವರು ಹೆಣ್ಣು ಮಕ್ಕಳ ವಸತಿ ಶಾಲೆಗಳಲ್ಲಿ ಮಹಿಳಾ ವಾರ್ಡನ್ ಗಳನ್ನು ನೇಮಿಸಲಾಗುವುದು ಎಂದು ಒಂದೂವರೆ ವರ್ಷದ ಹಿಂದೆ ಇದೇ ಸದನದಲ್ಲಿ ಮಾತು ಕೊಟ್ಟಿದ್ದಿರಿ. ಆದರೆ, ಇದುವರೆಗೂ ನೇಮಕ ಮಾಡಿಲ್ಲ ಎಂದು ಹೇಳಿದರು. ಇದಕ್ಕುತ್ತರಿಸಿದ ಆಂಜನೇಯ ಅವರು, ಬಾಲಕಿಯರ ವಸತಿ ನಿಲಯಗಳಲ್ಲಿ ಈಗಾಗಲೇ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಇದರಂತೆ ಈಶ್ವರಪ್ಪ ಅವರು ಮಧ್ಯೆಪ್ರವೇಶ ಮಾಡಿ ಮಹಿಳಾ ಹಾಸ್ಟೆಲ್ ಗಳಲ್ಲಿ ಎಲ್ಲಿಯೂ ಸಿಸಿಟಿವಿಗಳನ್ನು ಅಳವಡಿಕೆ ಮಾಡಿಲ್ಲ ಎಂದು ಹೇಳಿದರು. ಇದಕ್ಕುತ್ತರಿಸಿದ ಆಂಜನೇಯ ಅವರು, ಎಲ್ಲಾ ಹಾಸ್ಟೆಲ್ ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಹೇಳಿದರು.
ಈ ವೇಳೆಯೂ ಆಂಜನೇಯ ಅವರ ಪ್ರತಿಕ್ರಿಯೆಗೆ ನೇರವಾಗಿ ವಾಗ್ದಾಳಿ ನಡೆಸಿದ ಉಗ್ರಪ್ಪ ಅವರು, ಜನರಿಗೆ ತಪ್ಪು ಮಾಹಿತಿ ನೀಡಬೇಡಿ. ನಾನು ಸಾಕಷ್ಟು ಹಾಸ್ಟೆಲ್ ಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಸಿಸಿಟಿವಿಗಳನ್ನು ಅಳವಡಿಸಲಾಗಿಲ್ಲ. ಸಚಿವರಾಗಿ ಜವಾಬ್ದಾರಿಯುತ ಉತ್ತರ ನೀಡುವ ಬದಲು ಈ ರೀತಿಯಾಗಿ ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ ಎಂದು ಹೇಳಿದರು.
ನಂತರ ಉಗ್ರಪ್ಪ ಅವರಿಗೆ ಪ್ರತಿಕ್ರಿಯೆ ನೀಡಿದ ಆಂಜನೇಯ ಅವರು, ಪ್ರತಿಪಕ್ಷ ನಾಯಕ ಈಶ್ವರಪ್ಪ. ಉಗ್ರ ಅವರ ವರ್ತನೆ ಗೊಂದಲವನ್ನು ಸೃಷ್ಟಿಸುತ್ತಿದೆ. ಈಶ್ವರಪ್ಪ ಅವರ ಸ್ಥಾನವನ್ನು ಉಗ್ರಪ್ಪ ಅವರು ತೆಗೆದುಕೊಂಡಂತೆ ಕಾಣುತ್ತಿದೆ. ಈಶ್ವರಪ್ಪ ಅವರ ಕೆಲಸವನ್ನು ಉಗ್ರಪ್ಪ ಅವರು ಮತ್ತಷ್ಟು ಸುಲಭವಾಗುವಂತೆ ಮಾಡುತ್ತಿದ್ದಾರೆಂದು ಹೇಳಿದರು.