ಶೋಭಾ ಕರಂದ್ಲಾಜೆ - ಬಿ.ಎಸ್.ಯಡಿಯೂರಪ್ಪ
ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ರಾಜ್ಯ ಬಿಜೆಪಿ ಕೋರ್ ಕಮಿಟಿ ರಚನೆ ಮಾಡಿ ಆದೇಶ ಹೊರಡಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತೆ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಉನ್ನತ ಮಟ್ಟದ ಕಮಿಟಿಯಿಂದ ಹೊರಗಿಟ್ಟಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿರ್ದೇಶನದಂತೆ ಅರುಣ್ ಸಿಂಗ್ ಅವರು, ಬಿಎಸ್ ಯಡಿಯೂರಪ್ಪ, ಅನಂತ್ ಕುಮಾರ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಆರ್. ಅಶೋಕ್, ಪ್ರಹ್ಲಾದ್ ಜೋಶಿ, ಕೆ.ಎಸ್.ಈಶ್ವರಪ್ಪ, ಸಿಎಂ ಉದಾಸಿ, ಅರವಿಂದ್ ಲಿಂಬಾವಳಿ, ಗೋವಿಂದ ಕಾರಜೋಳ್, ನಳಿನ್ ಕುಮಾರ್ ಕಟೀಲು ಹಾಗೂ ಸಿ.ಟಿ.ರವಿ ಸೇರಿದಂತೆ 12 ಸದಸ್ಯರನ್ನೊಳಗೊಂಡ ಕೋರ್ ಕಮಿಟಿ ರಚಿಸಿದ್ದಾರೆ. ಅಲ್ಲದೆ ರಾಮ್ ಲಾಲ್, ಸಂತೋಷ್, ಪಿ.ಮುರಳಿಧರ್ ರಾವ್ ಹಾಗೂ ಅರುಣ್ ಕುಮಾರ್ ಅವರನ್ನು ಖಾಯಂ ಆಹ್ವಾನಿತರನ್ನಾಗಿ ಮಾಡಲಾಗಿದೆ.
ಶೋಭಾ ಕರಂದ್ಲಾಜೆ ಅವರಿಗೆ ಸ್ಥಾನ ನೀಡದಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರನ್ನು ಕೋರ್ ಕಮಿಟಿಗೆ ಸೇರಿಸಿಕೊಳ್ಳುವ ಮೂಲಕ ಸದಸ್ಯರ ಸಂಖ್ಯೆಯನ್ನು 14ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ಇತ್ತೀಚಿಗಷ್ಟೇ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ವಿರುದ್ಧವೇ ತಿರುಗಿಬಿದ್ದಿದ್ದ ಕೆಲವು ಅತೃಪ್ತ ನಾಯಕರು, ಬಿಎಸ್ ವೈ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಅಲ್ಲದೆ ಶೋಭಾ ಕರಂದ್ಲಾಜೆ ಹಸ್ತಕ್ಷೇಪದ ಬಗ್ಗೆಯೂ ದೂರಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಕೋರ್ ಕಮಿಟಿಯಿಂದ ಬಿಎಸ್ ವೈ ಆಪ್ತರನ್ನು ದೂರವಿಡುವ ಮೂಲಕ ರಾಜಕೀಯ ಸಂದೇಶ ರವಾನಿಸಿದೆ ಎನ್ನಲಾಗಿದೆ.