ಬೆಂಗಳೂರು: ಮೂರು ವರ್ಷಗಳ ಕಾಲ ಆಡಳಿತ ನಡೆಸಿದ್ದೀರಾ, ಉಳಿದ 2 ವರ್ಷಗಳ ಅವಧಿಯಲ್ಲಾದರೂ ನೀವು ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ಮಡಿಕೇರಿಯಲ್ಲಿ ಡಿವೈಎಸ್ ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿಮ್ಮ ಆಡಳಿತದಲ್ಲಿ ನಿಮಗೆ ಒತ್ತಡ ಇರಬಹುದು ನಿಜ. ಆದರೆ ಜನರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಸೂಕ್ತ ಕ್ರಮ ಕೈಗೊಂಡು, ಮತ್ತಷ್ಟು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ಮಾಡಿ ಎಂದು ಹೇಳಿದರು.
ಕರ್ನಾಟಕದಲ್ಲಿ ಅಧಿಕಾರಿಗಳು ಬದುಕಲಾರದಂಥ ಸ್ಥಿತಿ ನಿರ್ಮಾಣವಾಗಿದೆ, ದಾಳಿ ನಡೆಸಲು ಹೋದ ಅಧಿಕಾರಿಗಳ ಮೇಲೆ ಪ್ರತಿದಾಳಿ. ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ಆದರ್ಶ ರಾಜ್ಯವಾಗುವತ್ತ ಕರ್ನಾಟಕ ಹೆಜ್ಜೆ ಇಡುತ್ತಿದೆಯಾ? ಇಷ್ಟೆಲ್ಲಾ ಆದರೂ ನಿಮಗೆ ಪಾಪ ಪ್ರಜ್ಞೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಪ್ರಕರಣದಲ್ಲಿ ನಾವು ರಾಜಕೀಯ ಮಾಡ್ತಿಲ್ಲ. ಕಾನೂನು ನೋಡಿಕೊಂಡು ಗಣಪತಿ ಆತ್ಮಹತ್ಯೆ ಮಾಡಿಕೊಂಡ್ರಾ? ಡಿವೈಎಸ್ಪಿ ಗಣಪತಿ ಕುಟುಂಬವನ್ನು ಹಾಳು ಮಾಡಿದ್ದೀರಿ. ಗಣಪತಿ ಕುಟುಂಬದ ದೂರನ್ನು ಪರಿಗಣಿಸದ ಹಿನ್ನೆಲೆಯಲ್ಲಿ ನಾನೇ ಒಬ್ಬ ವಕೀಲರನ್ನು ನೇಮಿಸಿದ್ದೇನೆ. ಪ್ರಕರಣದ ಬಗ್ಗೆ ಕೋರ್ಟ್ ಮೊರೆ ಹೋಗಿದ್ದೇವೆ. ಅದರ ವಿಚಾರಣೆ ಜುಲೈ 18ಕ್ಕೆ ನಡೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.