ಬೆಂಗಳೂರು: ಡಿವೈಎಸ್ ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಧ ಜಾರ್ಜ್ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಅದನ್ನು ನೋವಿನಿಂದ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರು ಜಂಟಿ ಸುದ್ದಿಗೋಷ್ಟಿ ನಡೆಸಿದರು.
ಸಂಪುಟ ಸಹೋದ್ಯೋಗಿಯಾಗಿರುವ ಜಾರ್ಜ್ ರಾಜೀನಾಮೆ ನೀಡುವುದು ಬೇಡ ಎಂದರೂ ನೈತಿಕತೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಅವರ ಭಾವನೆಗಳಿಗೆ ಗೌರವ ಕೊಡಬೇಕೆಂದು ರಾಜೀನಾಮೆ ಅಂಗೀಕರಿಸಿದ್ದೇನೆ. ಇನ್ನೂ ಯಡಿಯೂರಪ್ಪರಿಂದ ಹಿಡಿದು ಬಿಜೆಪಿ ನಾಯಕರಿಗೆ ರಾಜೀನಾಮೆ ಕೇಳುವ ಯಾವ ನೈತಿಕತೆಯಿಲ್ಲ. ಯಡಿಯೂರಪ್ಪ ಮೇಲೆ 30 ಕೇಸ್‌ಗಳಿವೆ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ತಮ್ಮ ಬಗ್ಗೆ ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಕಾನೂನಿನ ಬಗ್ಗೆ ಗೌರವ ಹೊಂದಿದವರು, ಅದು ಯಾವುದೇ ಕೋರ್ಟ್ ಆದೇಶ ಇರಲಿ ಅದನ್ನು ಪಾಲಿಸುತ್ತೇವೆ ಎಂದು ಹೇಳಿದ್ದಾರೆ.
5 ವರ್ಷ ಅಧಿಕಾರದಲ್ಲಿರುವ ವೇಳೆ ಬಿಜೆಪಿಯವರು ಒಂದೂ ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ. ಈಗ ಬಿಜೆಪಿಯ ನಾಯಕರು ಸಿಬಿಐಗೆ ಕೊಡಿ ಎನ್ನುವುದನ್ನು ಬಾಯಿ ಪಾಠ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು. ಬಿಜೆಪಿ ನಾಯಕರು ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಬಂಡಾರು ದತ್ತಾತ್ರೇಯ ಅವರ ರಾಜೀನಾಮೆ ಕೇಳಲಿ. ಸ್ಮೃತಿ ಇರಾನಿ ರಾಜೀನಾಮೆ ಕೇಳಲಿ. ಹೊಸದಾಗಿ ಸಂಪುಟ ಸೇರಿರುವ 19 ಸಚಿವರ ಪೈಕಿ 9 ಮಂದಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ ಅವರ ರಾಜೀನಾಮೆ ಕೇಳಲಿ ಎಂದರು.