ಶ್ವೇತಾ ಅವರನ್ನು ಅಭಿನಂದಿಸುತ್ತಿರುವ ಚುನಾವಣಾ ಅಧಿಕಾರಿ ಕುಂಜಪ್ಪ
ಹಾಸನ: ಕಾಂಗ್ರೆಸ್-ಜೆಡಿಎಸ್ ನಡುವೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದ್ದ ಹಾಸನ ಜಿಲ್ಲಾ ಪಂಚಾಯ್ತಿ ಕಡೆಗೂ 'ಕೈ' ವಶವಾಗಿದ್ದು, ಬಾಗೇಶಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಶ್ವೇತಾ ದೇವರಾಜ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೋರಂ ಕೊರತೆ ಸೃಷ್ಟಿಸುವ ಮೂಲಕ ಜೆಡಿಎಸ್ ಸದಸ್ಯರು ಪದೇಪದೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಮುಂದೂಡಿದ್ದರು. ಆದರೆ ಅಂತಿಮವಾಗಿ ಇಂದು ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಶ್ವೇತಾ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ನ ಎಚ್.ಪಿ. ಶ್ರೀನಿವಾಸ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಎ.ಡಿ. ಚಂದ್ರಶೇಖರ್ ಹಾಗೂ ಜೆಡಿಎಸ್ ಎಚ್.ಪಿ. ಶ್ರೀನಿವಾಸ್ ಸ್ಪರ್ಧಿಸಿದ್ದರು. ಇಬ್ಬರೂ ಅಂತಿಮ ಕಣದಲ್ಲಿ ಉಳಿದಿರುವುದರಿಂದ ಮತದಾನ ನಡೆಸಲಾಯಿತು. ಚಂದ್ರಶೇಖರ್ 16 ಮತ ಗಳಿಸಿದರೆ, 23 ಸದಸ್ಯರ ಬೆಂಬಲ ಪಡೆದ ಶ್ರೀನಿವಾಸ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹಾಸನ ಜಿ.ಪಂ. ಒಟ್ಟಾರೆ 40 ಸ್ಥಾನಗಳಲ್ಲಿ ಜೆಡಿಎಸ್‌ನ 23, ಕಾಂಗ್ರೆಸ್‌ನ 16 ಹಾಗೂ ಬಿಜೆಪಿಯ ಒಬ್ಬ ಸದಸ್ಯರಿದ್ದಾರೆ. ಜೆಡಿಎಸ್‌ಗೆ ಬಹುಮತ ಇರುವುದರಿಂದ ಭವಾನಿ ರೇವಣ್ಣ ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗುತ್ತಾರೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಮೀಸಲಾತಿ ಘೋಷಿಸುವಾಗ ಹಾಸನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಿಡಲಾಯಿತು.
ಈ ವರ್ಗದಿಂದ ಏಕೈಕ ಮಹಿಳೆ ಆಯ್ಕೆಯಾಗಿದ್ದು, ಅವರು ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಇದರಿಂದ ಜೆಡಿಎಸ್‌ಗೆ ಬಹುಮತ ಇದ್ದರೂ ಅಧಿಕಾರ ಹಿಡಿಯಲಾಗದ ಸ್ಥಿತಿ ನಿರ್ಮಾಣವಾಗಿತ್ತು.