ಸಂಪುಟ ಕಸರತ್ತು: ಹೊಸಮುಖಗಳಿಗೆ ಮಣೆ, 10 ಸಚಿವರಿಗೆ ಕೊಕ್ ಸಾಧ್ಯತೆ
ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ಸಂಪುಟ ವಿಸ್ತರಣೆ ವಿಚಾರ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, 10 ಮಂದಿ ಹಾಲಿ ಸಚಿವರಿಗೆ ಕೊಕ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ...
ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ಸಂಪುಟ ವಿಸ್ತರಣೆ ವಿಚಾರ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, 10 ಮಂದಿ ಹಾಲಿ ಸಚಿವರಿಗೆ ಕೊಕ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಬಳ್ಳಾರಿ ಡಿವೈಎಸ್ ಪಿ ಅನುಮಮಾ ಶೆಣೈ ವರ್ಗಾವಣೆ ವಿಚಾರದಿಂದ ವಿವಾದಕ್ಕೀಡಾಗಿರುವ ಕೂಡ್ಲಿಗಿ ಶಾಸಕ ಪಿಟಿ ಪರಮೇಶ್ವರ್ ನಾಯಕ್, ಸಚಿವ ಅಂಬರೀಶ್, ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಸಂಬಂಧ ವ್ಯಾಪಕ ಟೀಕೆ ಎದುರಿಸಿದ್ದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ 10 ಹಾಲಿ ಸಚಿವರನ್ನು ಸಂಪುಟದಿಂದ ಕೈ ಬಿಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ 10 ಮಂದಿ ಹೊಸ ಮುಖಗಳಿಗೆ ಸ್ಥಾನ ಕಲ್ಪಿಸಲು ಸಿದ್ದರಾಮಯ್ಯ ಮುಂದಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಮತ್ತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಅವರಿಗೆ ಸ್ಥಾನ ನೀಡಲು ಸಿಎಂ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ನೂತನ ಸಂಪುಟದ ಪಟ್ಟಿಯೊಂದಿಗೆ ನವದೆಹಲಿಯಲ್ಲಿ ಸೋನಿಯಾಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ರಾಜ್ಯ ಉಸ್ತುವಾರಿ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭಿನ್ನಮತೀಯರ ಮಣಿಸಲು ಸಮಾಧಾನದ ತಂತ್ರ
ಇನ್ನು ಇದೇ ವೇಳೆ ಸಚಿವ ಸ್ಥಾನದ ಆಕಾಂಕ್ಷಿಗಳು, ಸಚಿವ ಸ್ಥಾನ ದೊರೆಯದ ಮುಖಂಡರು ಮತ್ತು ಬೆಂಬಲಿಗರನ್ನು ಸಮಾಧಾನಗೊಳಿಸಲು 2 ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು 2 ಖಾತೆಗಳ ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಂಡಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳ ಭಿನ್ನಮತೀಯ ಚಟುವಟಿಕೆ ಕೈ ಮೀರುವ ಪರಿಸ್ಥಿತಿ ಬಂದರೆ ಆಗ ಈ ಖಾಲಿ ಸ್ಥಾನಗಳನ್ನು ಮುಂದಿಟ್ಟುಕೊಂಡು ಅವರನ್ನು ಸಮಾಧಾನ ಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಯಾರ ಬದಲಿಗೆ ಯಾರು?
ಪಿಟಿ ಪರಮೇಶ್ವರ್ ನಾಯಕ್ - ಶಿವಮೂರ್ತಿ ನಾಯಕ್ ಅಥವಾ ಗೋಪಾಲಕೃಷ್ಣ
ಆರೋಗ್ಯ ಸಚಿವ ಯುಟಿ ಖಾದರ್ - ಎನ್ ಎ ಹ್ಯಾರಿಸ್ಗೆ (ಶಾಂತಿನಗರ ಶಾಸಕ)
ವಸತಿ ಸಚಿವ ಅಂಬರೀಶ್ - ಕೆ ಸುಧಾಕರ್ (ಚಿಕ್ಕಬಳ್ಳಾಪುರ ಶಾಸಕ)
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್- ಕಾಗೋಡು ತಿಮ್ಮಪ್ಪ (ಸಾಗರ ಶಾಸಕ)
ಅಭಯ್ ಚಂದ್ರ ಜೈನ್ - ಸುಧಾಕರ್ (ಹಿರಿಯೂರು ಶಾಸಕ )
ಕೃಷ್ಣ ಬೈರೇಗೌಡ - ಎಂ ಕೃಷ್ಣಪ್ಪ (ವಿಜಯನಗರ ಶಾಸಕ)
ದಿನೇಶ್ ಗುಂಡೂರಾವ್ - ರಮೇಶ್ ಕುಮಾರ್ (ಶ್ರೀನಿವಾಸಪುರ ಶಾಸಕ)
ವಿನಯ್ ಕುಮಾರ್ ಸೊರಕೆ- ಪ್ರಮೋದ್ ಮದ್ವರಾಜ್ (ಉಡುಪಿ ಶಾಸಕ)
ಶ್ಯಾಮನೂರು ಶಿವಶಂಕರಪ್ಪ- ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ)
ಬಿ ಶ್ರೀನಿವಾಸ್ ಪ್ರಸಾದ್ - ಪ್ರಿಯಾಂಕ್ ಖರ್ಗೆ (ಚಿತ್ತಾಪುರ ಶಾಸಕ)
ಎಸ್ ಆರ್ ಪಾಟೀಲ್ - ಅಪ್ಪಾಜಿ ನಾಡಗೌಡ ಅಥವಾ ಸಿದ್ದು ನ್ಯಾಮಗೌಡ
ಉಳಿದಂತೆ ಕೆಬಿ ಕೋಳಿವಾಡಗೆ ಸ್ಪೀಕರ್ ಸ್ಥಾನ ನೀಡುವ ಸಾಧ್ಯತೆ ಇದ್ದು, ಸಂಪುಟಕ್ಕೆ ಚೆನ್ನಪಟ್ಟಣ ಶಾಸಕ ಸಿಪಿ ಯೋಗಿಶ್ವರ್ ರನ್ನು ಕರೆತರುವ ಸಾಧ್ಯತೆ ಇದೆ.