ಮಂಡ್ಯ: ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಡುವುದಾದರೆ ತಮ್ಮ ಪತ್ನಿ ಸುಮಲತಾರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ ಎಂಬುದು ಸುಳ್ಳು ವದಂತಿ, ನಾನು ಪಕ್ಷದ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ವಸತಿ ಸಚಿವ ಅಂಬರೀಷ್ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ತಮ್ಮನ್ನು ಇಟ್ಕೊಂಡ್ರೂ ಸಂತೋಷ. ಸಂಪುಟದಲ್ಲಿ ಉಳಿಸಿಕೊಂಡರೆ ಅಥವಾ ಬಿಟ್ಟರೆ ತಮಗೇನು ಲಾಭವೂ ಇಲ್ಲ, ನಷ್ಟವೂ ಇಲ್ಲ. ಸಂಪುಟದಿಂದ ಕೈಬಿಡಬೇಕೆಂದರೆ ಏನಾದರೂ ತಪ್ಪು ಕಂಡು ಹಿಡಿಯಬೇಕು. ಅಂತಹ ತಪ್ಪನ್ನು ತಾವು ಮಾಡಿಲ್ಲ. 3ವರ್ಷದ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ತಮ್ಮ ಮೇಲಿಲ್ಲ ಎಂದರು.
ತನ್ನನ್ನು ಸಚಿವನನ್ನಾಗಿ ಮಾಡಿ ಎಂದು ಕೇಳಿರಲಿಲ್ಲ. ಈಗ ಸಂಪುಟದಲ್ಲಿ ಮುಂದುವರಿಸಿ ಎಂದು ಕೂಡ ಮುಖ್ಯಮಂತ್ರಿಗಳನ್ನು ಕೇಳಿಲ್ಲ ಎಂದ ಅವರು, ಸಚಿವ ಸ್ಥಾನದಿಂದ ಕೈಬಿಡಬೇಕೆಂದರೆ ಪತ್ನಿಗೆ ಸಿನಿಮಾ ಕ್ಷೇತ್ರದಿಂದ ಎಂಎಲ್‌ಸಿ ಮಾಡಿ ಎಂದು ಕೇಳಿಲ್ಲ. ಬೇರೆಯವರಿಗೆ ಸ್ಥಾನ ಮಾನ ಕೊಡಿ ಎಂದು ಕೇಳುತ್ತೇನೆಯೇ ಹೊರತು ತಮ್ಮ ಪತ್ನಿ, ಪುತ್ರನಿಗೆ ಅಧಿಕಾರ ಕೊಡಿ ಎಂದು ಕೇಳುವ ಜಾಯಮಾನ ತಮ್ಮದಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಮ್ಮ ಪತ್ನಿ, ಹಿರಿಯ ನಟಿ ಸುಮಲತಾರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿ ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ಖಾತ್ರಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿತ್ತು