ರಾಜಕೀಯ

ಬಂಡಾಯ ಶಮನಕ್ಕೆ 'ಕೈ' ಕಮಾಂಡ್ ಮುಂದು: ಅತೃಪ್ತ ಶಾಸಕರೊಂದಿಗೆ ದಿಗ್ಗಿ ಸಭೆ

Lingaraj Badiger
ಬೆಂಗಳೂರು: ಸಂಪುಟ ಪುನಾರಚನೆಯಿಂದಾಗಿ ಸಚಿವ ಸ್ಥಾನ ಕಳೆದುಕೊಂಡ ಹಾಗೂ ಸಚಿವ ಆಕಾಂಕ್ಷಿ ಅತೃಪ್ತ ಶಾಸಕರು ನಾಯಕತ್ವ ಬದಲಾವಣೆಯ ಕೂಗು ಎತ್ತುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಡಾಯ ಶಮನಕ್ಕಾಗಿ ಹೈಕಮಾಂಡ್ ಮೊರೆ ಹೋಗಿದ್ದಾರೆ. 
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ನಾಳೆ ಸಂಜೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಶನಿವಾರ ಅತೃಪ್ತ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.
ಬಂಡಾಯ ಶಾಸಕರ ನಡೆ ಬಿರುಸಿಗೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಜೊತೆ ಸಮಾಲೋಚನೆ ನಡೆಸಿದರು. ನಂತರ ಬಂಡಾಯ ಶಮನಕ್ಕೆ ಹೈಕಮಾಂಡ್ ಮೊರೆ ಹೋಗುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರ ಮನೆಯಲ್ಲಿ ಸಭೆ ಸೇರಿದ್ದ ಅತೃಪ್ತ ಶಾಸಕರು, 5 ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಅಂತ ಹೇಳಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಳಿವಿಗೆ ಇದು ಮಹತ್ವದ ಕಾಲ. ಸಿದ್ದರಾಮಯ್ಯ ಪೂರ್ಣವಾಧಿ ಪೂರೈಸುತ್ತಾರೆಂದು ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕೆ ಯಾವುದೇ ಕೊರತೆ ಇಲ್ಲ. ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಅರ್ಹ ನಾಯಕರಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಭೆಯ ನಂತರ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ನಾನಾಗಲಿ, ಅಂಬರೀಶ್ ಅಗಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಲ್ಲ. ಕಾಂಗ್ರೆಸ್ ಉಳಿವಿಗಾಗಿ ನಾಯಕತ್ವ ಬದಲಾವಣೆ ಅಗತ್ಯ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ತಿಳಿಸಿದರು.
SCROLL FOR NEXT