ಮೈಸೂರು: ತಮ್ಮ ಪುತ್ರ ಹಾಗೂ ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ಈಶ್ವರಪ್ಪ 'ಹುಚ್ಚು ನಾಯಿ' ಇದ್ದಂತೆ ಎಂದು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಈಶ್ವರಪ್ಪನವರ ಆರೋಪದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸದ ಸಚಿವರು, ಅವರ ಯಾವುದೇ ಆರೋಪಗಳಿಗೆ ನಾನು ಪ್ರತಿಕ್ರಿಯಿಸಲ್ಲ.ನನ್ನ ಹಾಗೂ ನನ್ನ ಮಗನ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ್ದಂತೆ ಅವರ ವಿರುದ್ಧ ಯಾವುದೇ ಮಾನನಷ್ಟ ಮೊಕದಮ್ಮೆ ಸಹ ದಾಖಲಿಸಲ್ಲ. ಮಾನ ಇಲ್ಲದವರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿ ಏನ್ ಪ್ರಯೋಜನ ಎಂದರು.
ಇದೇ ವೇಳೆ ನನ್ನ ಮಗ ಅಕ್ರಮವಾಗಿ ಒಂದು ಬಾಂಡ್ಲಿ ಮರಳು ಸಾಗಿಸಿದ್ದನ್ನು ಅವರು ದಾಖಲೆ ಸಮೇತ ಸಾಬೀತುಪಡಿಸಿದರೆ ಸಚಿವ ಸ್ಥಾನ ರಾಜಿನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.
ನಿನ್ನೆಯಷ್ಟೇ ಮೈಸೂರು ಪ್ರಾಂತ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತಮ್ಮ ಪುತ್ರ ಸುನೀಲ್ ಬೋಸ್ ಜೊತೆ ಸಚಿವ ಮಹದೇವಪ್ಪ ಭಾಗಿಯಾಗಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಅವರು ಆರೋಪಿಸಿದ್ದರು. ಅಲ್ಲದೆ ಅಪ್ಪ ಮಕ್ಕಳು ನಿರಂತರವಾಗಿ ಮರಳು ಲೂಟಿ ನಡೆಸುತ್ತಿದ್ದರೂ ಪೊಲೀಸರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.