ರಾಜಕೀಯ

ಸಿಎಂ ಆಗಿರೋವರೆಗೂ ಯಾವುದೇ ಬಿಸಿನೆಸ್ ಬೇಡ: ಸಿದ್ದರಾಮಯ್ಯ

Srinivasamurthy VN

ಬೆಂಗಳೂರು: ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಬಿಸಿನೆಸ್ ಮಾಡದಂತೆ ಸಿಎಂ ಸಿದ್ದರಾಮಯ್ಯ ತಮ್ಮ ಮಕ್ಕಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ದುಬಾರಿ ವಾಚ್ ಪ್ರಕರಣ ಮತ್ತು ಮಗ ಯತೀಂದ್ರ ಕುರಿತಂತೆ ಕೇಳಿಬಂದಿದ್ದ ಸ್ವಜನ ಪಕ್ಷಪಾತ ಆರೋಪ ಹಿನ್ನಲೆಯಲ್ಲಿ ಇಮೇಜ್ ಮೇಕ್ ಓವರ್ ಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ  ಅವರು, ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ರೀತಿಯ ಉಧ್ಯಮಗಳಲ್ಲಿ ತೊಡಗಿಸಿಕೊಳ್ಳದಂತೆ ಮಕ್ಕಳಿಗೆ ಸೂಚಿಸಿದ್ದಾರಂತೆ. ಈ ವಿಚಾರವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರು  ಹೇಳಿದ್ದು. ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ತಾವು ಅಧಿಕಾರದಲ್ಲಿ ಇರುವವರೆಗೂ ಯಾವುದೇ ರೀತಿಯ ಬಿಸಿನೆಸ್ ಮಾಡದಂತೆ ಮತ್ತು ವಾಣಿಜ್ಯೋಧ್ಯಮದ ಪಾಲುದಾರರಾಗದಂತೆ ತಮ್ಮ ಮಕ್ಕಳಿಗೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸ್ವಜನಪಕ್ಷಪಾತ ಆರೋಪ ಮತ್ತು ಸಿದ್ದರಾಮಯ್ಯ ಅವರ ಪುತ್ರ ಡಾ.ಯಂತೀದ್ರ ಅವರ ರಾಜಿನಾಮೆ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ  ಅವರು, "ಸಂಸ್ಥೆ ತೊರೆಯುವಂತೆ ನಾನೇ ನನ್ನ ಪುತ್ರನಿಗೆ ಸಲಹೆ ನೀಡಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದು, ಮಗ ನನ್ನ  ಪ್ರಭಾವ ಬಳಕೆ ಮಾಡಿ ಬಿಸಿನೆಸ್ ಮಾಡಿದ್ದಾರೆ ಎಂದು ಸುದ್ದಿಗಳು ಹರಡಿದ್ದವು. ಹೀಗಾಗಿ ನನ್ನ ಹೆಸರಿಗೆ ಕೆಟ್ಟ ಹೆಸರು ತರದಂತೆ ಮಕ್ಕಳಲ್ಲಿ ಕೇಳಿಕೊಂಡಿದ್ದೆ. ಅಲ್ಲದೇ ತಾವು ಮುಖ್ಯಮಂತ್ರಿಯಾಗಿರುವವರೆಗೂ ಯಾವುದೇ ಉದ್ಯಮದಲ್ಲಿ ತೊಡಗಿಸಿಕೊಳ್ಳದಂತೆ ಸೂಚನೆ ನೀಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಮ್ಯಾಟ್ರಿಕ್ಸ್ ಇಮ್ಯಾಜಿನ್ ಸಲ್ಯೂಷನ್ ಸಂಸ್ಥೆ ಪಾಲುದಾರಿಕೆಯಿಂದ ತಮ್ಮ ಪುತ್ರ ಡಾ.ಯತೀಂದ್ರ ಅವರು ಹೊರಬಂದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ ಪುತ್ರನ ಬೆನ್ನಿಗೆ ನಿಂತು ಮಾತನಾಡಿದರು. "ಸಂಸ್ಥೆ ತೊರೆಯಲು ಹೇಳಿದಾಕ್ಷಣ ಆತ ತಪ್ಪುಮಾಡಿದ್ದಾನೆ ಎಂದು ಅಲ್ಲ ಅಥವಾ ಕಾನೂನು ಮೀರಿ ಉದ್ಯಮ ನಡೆಸಿದ್ದಾನೆ ಎಂದೂ ಅಲ್ಲ. ನೈತಿಕತೆ  ಹಿನ್ನಲೆಯಲ್ಲಿ ನಾನೇ ಆ ಸಂಸ್ಥೆ ತೊರೆಯುವಂತೆ ಮಗನಿಗೆ ಸಲಹೆ ನೀಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ವಿಧಾನ ಮಂಡಲ ಮತ್ತು ವಿಧಾನಸಭೆ ಕಲಾಪದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿತ್ತು. ಇದಾದ ಬೆನ್ನಲ್ಲೇ ಸಿದ್ದರಾಮಯ್ಯ  ಅವರ ಪುತ್ರ ಡಾ.ಯತೀಂದ್ರ ಅವರು ಪಾಲುದಾರರಾಗಿದ್ದ ಮ್ಯಾಟ್ರಿಕ್ಸ್ ಇಮ್ಯಾಜಿಂಗ್ ಸಲ್ಯೂಷನ್ ಸಂಸ್ಥೆಗೆ ವಿಕ್ಟೋರಿಯಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ತೆರೆಯಲು ಟೆಂಡರ್  ನೀಡಲಾಗಿತ್ತು. ಡಾ.ಯಂತೀದ್ರ ಅವರು ತಮ್ಮ ತಂದೆಯ ಪ್ರಭಾವ ಬಳಸಿ ಈ ಟೆಂಡರ್ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಯತೀಂದ್ರ ಅವರು ಆ ಸಂಸ್ಥೆಯ  ಪಾಲುದಾರಿಕೆಯಿಂದ ಹೊರಬಂದಿದ್ದರು.

ಈ ಎಲ್ಲ ಪ್ರಕರಣಗಳಿಂದ ಎಚ್ಚೆತ್ತಂತಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಇಮೇಜ್ ಮೇಕ್ ಓವರ್ ಗೆ ಮುಂದಾಗಿದ್ದು, ತಮ್ಮ ಮಕ್ಕಳಿಗೆ ವಿವಾದಗಳಿಂದ ಮತ್ತು ಬಿಸಿನೆಸ್ ನಿಂದ  ದೂರುವುಳಿಯುವಂತೆ ಸೂಚನೆ ನೀಡಿದ್ದಾರೆ.

SCROLL FOR NEXT