ಬೆಂಗಳೂರು: 2012 ರಲ್ಲಿ ಅಧಿಕಾರದಲ್ಲಿದ್ದಾಗ ಟಿಪ್ಪುವನ್ನು ಹಾಡಿ ಹೊಗಳಿದ ಬಿಜೆಪಿ ನಾಯಕರು, 2018ರ ಚುನಾವಣೆಯ ಮೇಲೆ ಕಣ್ಣಿಟ್ಟು ಈಗ ಅವನನ್ನು ವಿರೋಧಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಟಿಪ್ಪುಸುಲ್ತಾನ್ ಜಯಂತಿಯನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಟಿಪ್ಪು ಪೇಟ ಧರಿಸಿ, ಖಡ್ಗ ಹಿಡಿದಿದ್ದಿರಿ, ಈಗ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೇ 24 ಗಂಟೆಗಳಲ್ಲಿ ಟಿಪ್ಪು ಜಯಂತಿ ನಿಷೇಧಿಸುವುದಾಗಿ ಹೇಳುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕ ಗೆಜೆಟಿಯರ್ ಇಲಾಖೆ ಪ್ರಕಟಿಸಿರುವ ಟಿಪ್ಪು ಸುಲ್ತಾನ್ ಕುರಿತ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಟಿಪ್ಪುವನ್ನು ಹಾಡಿ ಹೊಗಳಿದ್ದರು. ಮುಖ್ಯಮಂತ್ರಿಯಾಗಿ ಹೊಗಳಿದ್ದವರಿಗೆ ಈಗ ಏನಾಗಿದೆ ಎಂದು ಕೇಳಿದ ಅವರು ಯಾವುದೇ ಸಮಾಜವನ್ನು ಓಲೈಸಲು ಟಿಪ್ಪು ಜಯಂತಿ ಆಚರಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮಹಾಪುರುಷರು ತಾವು ಇಂತ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ, ಸರ್ಕಾರ ಜಾತ್ಯಾತೀತವಾದದ್ದು. ಆರ್ ಎಸ್ಎಸ್ ಮತ್ತು ಬಿಜೆಪಿ ನಾಯಕರಿಗೆ ಸ್ವಲ್ಪ ಸೆನ್ಸ್ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.