ರಾಜಕೀಯ

ಜೆಡಿಎಸ್ ನಲ್ಲೇ ಇದ್ದಿದ್ದರೆ ನಾನು ಸಿಎಂ ಆಗ್ತಿರ್ಲಿಲ್ಲ: ಸಿಎಂ ಸಿದ್ದರಾಮಯ್ಯ

Shilpa D

ಬೆಳಗಾವಿ: ಒಂದು ವೇಳೆ ನಾನು ಜೆಡಿಎಸ್ ನಲ್ಲೇ ಉಳಿದುಕೊಂಡಿದ್ದರೇ ಜೀವನದಲ್ಲಿ ನಾನು ಮುಖ್ಯಮಂತ್ರಿ ಆಗಲು ಸಾಧ್ಯವೇ ಇರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಸಭೆ ಚಳಿಗಾಲದ ಅಧಿವೇಶನದಲ್ಲಿ ಜೆಡಿಎಸ್ ಶಾಸಕ ವೈ ಎಸ್ ವಿ ದತ್ತ, ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ 50 ಸೀಟು ಪಡೆದಾಗ ನೀವು ಉಪ ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿದ್ದೀರಿ, ಆಗ ಬಡವರ ರೈತರ ಪರವಾಗಿದ್ದೀರಿ, ನಮ್ಮ ಜೊತೆಯಲ್ಲೇ ಸಿಎಂ ಆಗುತ್ತಿದ್ರಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನಾನು ಜೆಡಿಎಸ್ ನಲ್ಲೇ ಇದ್ದಿದ್ದರೇ ಸಿಎಂ ಆಗುತ್ತಾ ಇರಲಿಲ್ಲ ಎಂದು ಹೇಳಿದರು.

ಅಬ್ ಕೀ ಬಾರ್ ಕುಮಾರಸ್ವಾಮಿ ಸರ್ಕಾರ್ ಎಂಬ ಘೋಷಣೆಯೊಂದಿಗೆ ವಿಧಾನಸಭೆ ಚುನಾವಣೆಗೆ ಹೋಗಿ, ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ನೀಡಿರುವ ಹೇಳಿಕೆ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ ಜನತೆಗೆ ತಪ್ಪು ಭರವಸೆ ನೀಡುವುದನ್ನು ನಿಲ್ಲಿಸಬೇಕು ಎಂದರು.

ನೀವು ಹುಬ್ಬಳ್ಳಿ ಅಥವಾ ಕಲಬುರಗಿಯಲ್ಲಿ ಸ್ವಂತ ಮನೆ ಮಾಡಿಕೊಂಡರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. 2005ರಲ್ಲಿ  ಎಚ್ ಸಿ ಮಹಾದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಅವರ ಜೊತೆ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಉಚ್ಚಾಟಿಸಲಾಗಿತ್ತು.

ನಂತರ ಎಐಪಿಜೆಡಿ ಪಕ್ಷ ಕಟ್ಟಿದ ಸಿದ್ದರಾಮಯ್ಯ 2006 ರಲ್ಲಿ ಆ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಿ ಚಾಮುಂಡೇಶ್ವರಿ ವಿಧಾನ ಸಭೆ ಉಪ ಚುನಾವಣೆಯಲ್ಲಿ 257 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ನಂತರ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ 2013 ರಲ್ಲಿಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

SCROLL FOR NEXT