ರಾಜಕೀಯ

ಕಾವೇರಿ ವಿವಾದ: ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

Shilpa D

ಮಲೆ ಮಹದೇಶ್ವರ ಬೆಟ್ಟ: ತಮಿಳುನಾಡಿಗೆ ನೀರು ಬಿಡದಂತೆ ಸರ್ಕಾರ ಕೈಗೊಂಡ ನಿರ್ಧಾರ ಸರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಹಾಗೂ ಕಾವೇರಿ ಸಮಸ್ಯೆ ಸುಖಾಂತ್ಯವಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾವು ನ್ಯಾಯಾಲಯದ ನಿರ್ದೇಶನದ ವಿರುದ್ಧ ಯಾವುದೇ ಕೆಲಸ ಮಾಡುತ್ತಿಲ್ಲ.  ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮಾರ್ಪಡಿಸಿ ಎಂದು ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರದಿಂದ ರಾಜ್ಯದ ಜಲಾಶಯಗಳು ಖಾಲಿಯಾಗಿವೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ರೈತರು ಬೆಳೆ ತ್ಯಾಗ ಮಾಡಿದ್ದಾರೆ. ತಮಿಳು ನಾಡಿನ ಮೆಟ್ಟೂರು ಜಲಾಶಯದಲ್ಲಿ 52 ಟಿಎಂಸಿ ನೀರಿದ್ದರೆ, ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಲ್ಲಿ 26 ಟಿಎಂಸಿ ಮಾತ್ರ ನೀರಿದೆ. ಅದನ್ನು ನಾವು ಕುಡಿಯುವ ನೀರಿಗಾಗಿ ಮೀಸಲಿಟ್ಟು ನಿರ್ಣಯ ಮಾಡಿದ್ದೇವೆ. 2001 ಹಾಗೂ 2010ರ ರಾಷ್ಟ್ರೀಯ ಜಲನೀತಿಯೂ ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದು ಹೇಳುತ್ತದೆ. ಆದಾಗ್ಯೂ ಸುಪ್ರೀಂಕೋರ್ಟ್‌ ತಮಿಳುನಾಡಿಗೆ 2ನೇ ಬೆಳೆ ಸಾಂಬಾ ಬೆಳೆಗೆ ನೀರು ಕೊಡಿ ಎನ್ನುತ್ತಿದೆ. ನಾವು ಕೇಳುತ್ತಿರುವ ಕುಡಿಯುವ ನೀರಿನ ಉದ್ದೇಶಕ್ಕೂ ಕೋರ್ಟ್‌ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಇನ್ನೂ ಕಾವೇರಿ ನದಿ ವಿಷಯದಲ್ಲಿ ದಶಕಗಳಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದ ಅವರು, ರಾಜ್ಯದ ಪರ ವಕೀಲ ಪಾಲಿ ನಾರಿಮನ್ ಅವರನ್ನು ಬದಲಾಯಿಸುವ ಯಾವುದೇ ಪ್ರಸ್ತಾವನೆಗಳು ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.

ಕಾವೇರಿ ವಿವಾದ ಸಂಬಂಧ ರಾಜ್ಯದ ಎಲ್ಲಾ ಸಂಸದರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರುವುದಾಗಿ ಹೇಳಿದ ಅವರು, ಸಮಸ್ಯೆ ಬಗೆಹರಿಸಲು ನೆರವು ನೀಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಸ್,ಕೃಷ್ಣ ಅವರ ಬೆಂಬಲಕ್ಕೆ ಧನ್ಯವಾದ ತಿಳಿಸಿದರು.

SCROLL FOR NEXT