ರಾಜಕೀಯ

ಬಿಜೆಪಿ ಅತೃಪ್ತ ನಾಯಕರ ಸಮಾವೇಶದ ಬಗ್ಗೆ ಪಕ್ಷದ ವರಿಷ್ಠರಿಗೆ ಬಿಎಸ್ ವೈ ಮಾಹಿತಿ

Lingaraj Badiger
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ತಾರಕಕ್ಕೇರಿದ್ದು, ಅತೃಪ್ತ ನಾಯಕ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಸಂಘಟನೆ ಉಳಿಸಿ ಸಮಾವೇಶದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ.
ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಕೆಲವು ಮುಖಂಡರು ಇಂದು ಅರಮನೆ ಮೈದಾನದಲ್ಲಿ ಸಂಘಟನೆ ಉಳಿಸಿ ಸಮಾವೇಶ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 
ಅತೃಪ್ತ ನಾಯಕರ ಈ ಸಮಾವೇಶದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಎಸ್ ಯಡಿಯೂರಪ್ಪ, ಈ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಮರುಳಿಧರ್ ರಾವ್ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದು, ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಹಾಗೂ ಪದಾಧಿಕಾರಿಗಳ ಅವಹೇಳನ ಮಾಡಲಾಗಿದೆ ಎಂದು ದೂರಿದ್ದಾರೆ. 
ಈಶ್ವರಪ್ಪ ಅವರು ತಮ್ಮ ಸಾಂವಿಧಾನಿಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಇಂದಿನ ಸಮಾವೇಶದ ಭಾಷಣದಲ್ಲಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಅಲ್ಲದೆ ಮೇ 10ರೊಳಗೆ ಸಮಸ್ಯೆ ಪರಿಹರಿಸದಿದ್ದರೆ ಮೇ 20ಕ್ಕೆ ಮತ್ತೆ ಅತೃಪ್ತರ ಸಮಾವೇಶ ಮಾಡುವುದಾಗಿ ಎಚ್ಚರಿಸಿದ್ದಾರೆ ಎಂದು ವರಿಷ್ಠರಿಗೆ ಬಿಎಸ್ ವೈ ಮಾಹಿತಿ ನೀಡಿದ್ದಾರೆ.
ಇನ್ನು ಅತೃಪ್ತರ ಸಮಾವೇಶಕ್ಕೆ ಬಿಎಸ್ ವೈ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈಶ್ವರಪ್ಪ ಹಾಗೂ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಮಾವೇಶದ ಬಳಿಕ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಅಶ್ವತ್ ನಾರಾಯಣ್, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಸಂಸದ ಪಿ.ಸಿ.ಮೋಹನ್ ಅವರು, ಈಶ್ವರಪ್ಪ ಹಾಗೂ ಬಿಎಸ್ ವೈ ಅವರ ನಡುವೆ ಇದ್ದ ಮುನಿಸಿನ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ದೆಹಲಿಗೆ ಕರೆಯಿಸಿ ಸಂಧಾನ ಮಾಡಿ ಕಳುಹಿಸಿದ ಮೇಲೆಯೂ ಈಶ್ವರಪ್ಪ ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದರು.
SCROLL FOR NEXT