ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮಿಷನ್113 ಘೋಷಿಸಿದ್ದು ಜೆಡಿಎಸ್ ಹೋರಾಟದ ಮುಂಚೂಣಿಯಲ್ಲಿದೆ.
ಸಮ್ಮಿಶ್ರ ಪಾಲುಗಾರಿಕೆಗೆ ಸಣ್ಣ ಆಟಗಾರನೇ ಉತ್ತಮ, ಹೀಗಾಗಿ ಕುಮಾರಸ್ವಾಮಿ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಸಖ್ಯ ಬೆಳೆಸಲು ಸಿದ್ಧರಾಗಿದ್ದಾರೆ.
ಜೆಡಿಎಸ್ ಮುಖಂಡರುಗಳಾದ ಎಚ್ ಡಿ ದೇವೇಗೌಡ ಮತ್ತು ಕುಮಾರ ಸ್ವಾಮಿ ವಿಶ್ರಾಂತಿಯಿಲ್ಲದಂತೆ ಈಗಾಗಲೇ ಚುನಾವಣಾ ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹೋರಾಡುವಲ್ಲಿ ಜೆಡಿಎಸ್ ಉತ್ತಮ ಯೋಜನೆ ರೂಪಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಅಧಿಕಾರವಿಲ್ಲದೇ ಹಪಹಪಿಸುತ್ತಿರುವ ಜೆಡಿಎಸ್ ಏಕಾಂಗಿಯಾಗಿ ಚುನಾವಣೆ ಎದುರಿಸಲು ತಯಾರಾಗುತ್ತಿದೆ. ಆದರೆ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಎಂಬುದನ್ನು ಜೆಡಿಎಸ್ ಸೂಕ್ಷ್ಮವಾಗಿ ಅರಿತುಕೊಂಡಿದೆ.
ಹಳೇಯ ಮೈಸೂರು ಭಾಗದಲ್ಲಿ ಜೆಡಿಎಸ್ ಸಾಂಪ್ರಾದಾಯಿಕ ಪಕ್ಷ ಎಂದೇ ಗುರುತಿಸಿಕೊಂಡಿತ್ತು, ಆದರೆ ಸದ್ಯ ಉತ್ತರ ಕರ್ನಾಟಕದಲ್ಲಿಯೂ ಜೆಡಿಎಸ್ ದೊಡ್ಡ ಪ್ರಮಾಣದಲ್ಲಿ ರಣತಂತ್ರ ಮಾಡುತ್ತಿದೆ. ಬರ ಪೀಡಿತ ಜಿಲ್ಲೆಗಳ ಭೇಟಿ ಹಾಗೂ ಸಹಾಯ ಮತ್ತು ಹೆಚ್ಚಾಗಿ ರೈತರ ಓಲೈಕೆಯಲ್ಲಿ ಜೆಡಿಎಸ್ ಮುಳುಗಿದೆ.
ಕಾಂಗ್ರೆಸ್ ವಿರೋಧಿ ಅಂಶಗಳನ್ನು ಬಹುದೊಡ್ಡ ಅಸ್ತ್ರವನ್ನಾಗಿ ಜೆಡಿಎಸ್ ಮುಂದಿಟ್ಟುಕೊಂಡಿದೆ. ಸಾಲಮನ್ನಾ ಭರವಸೆ ಮೂಲಕ 2.3 ಶೇ. ಮತಗಳು ತಮ್ಮ ಪಾಲಾಗಲಿವೆ ಎಂದು ಜೆಡಿಎಸ್ ನಂಬಿದೆ. ಉತ್ತರ ಕರ್ನಾಟಕದಲ್ಲಿ ಸರ್ಕಾರದ ವಿರೋಧಿ ಅಂಶಗಳನ್ನು ಬಳಸಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ಹೇಳಿದ್ದಾರೆ.
ಇನ್ನೂ ಜಾತಿ ಲೆಕ್ಕಾಚಾರವನ್ನು ಮನಗಂಡಿರುವ ಜೆಡಿಎಸ್ ಲಿಂಗಾಯತರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಜೊತೆಗೆ ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ನಂತರ ಪಟ್ಟಿ ರಿಲೀಸ್ ಮಾಡಲು ಕಾಯುತ್ತಿದೆ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವೇ ಕೆಲವು ಮತಗಳ ಅಂತರದಿಂದ ಜೆಡಿಎಸ್ 18 ಕ್ಷೇತ್ರಗಳಲ್ಲಿ ಪರಾಭವಗೊಂಡಿತು ಎಂದು ಹೇಳಿದೆ.
ಹಳೇಯ ಮೈಸೂರು ಭಾಗದಲ್ಲಿ ತಮ್ಮ ಕೈ ಮೇಲಾಗಲಿದೆ ಎಂದು ಜೆಡಿಎಸ್ ಭರವಸೆ ಹೊಂದಿದೆ. ಬಿಜೆಪಿಗೆ ಈ ಪ್ರದೇಶದಲ್ಲಿ ಹೆಚ್ಚಿನ ಮಾನ್ಯತೆ ಇರದ ಕಾರಣ ಮತ ಹಂಚಿಕೆ ಪ್ರಮಾಣದಲ್ಲಿ ಕಡಿಮೆಯಾಗುವುದಿಲ್ಲ, ಈ ಭಾಗದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಪಕ್ಷದ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
ಸರ್ಕಾರಿ ವಿರೋಧಿ ಅಲೆಯನ್ನು ಗಮನದಲ್ಲಿರಿಸಿಕೊಂಡು ಜೆಡಿಎಸ್ ಹೆಚ್ಚಿನ ಪ್ರಮಾಣದಲ್ಲಿ ಲೆಕ್ಕಾಚಾರ ಹಾಕುತ್ತಿದೆ, ಚುನಾವಣೆಗೆ ಇನ್ನೂ 8 ತಿಂಗಳ ಕಾಲಾವಕಾಶವಿದ್ದು, ಮತ್ತಷ್ಟು ತಂತ್ರಗಾರಿಕೆ ರೂಪಿಸಲು ಅವಕಾಶವಿದೆ, ಆದರೂ ಜೆಡಿಎಸ್ ಮತ್ತೊಮ್ಮೆ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ಹೇಳಿದ್ದಾರೆ.