ಬೆಂಗಳೂರು: ಗುಜರಾತ್ ಚುನಾವಣೆ ಬಳಿಕ 'ಮೈಸೂರು ಮಿನರಲ್ಸ್ ಕಂಪನಿ'ಯಲ್ಲಿ ನಡೆದ ದೊಡ್ಡ ಭ್ರಷ್ಟಾಚಾರದ ಹಗರಣದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಡಿಸೆಂಬರ್ 18 ರ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಈ ಸರ್ಕಾರದ ದೊಡ್ಡ ಹಗರಣವನ್ನು ದಾಖಲೆ ಸಮೇತ ಜನರ ಮುಂದಿಡುತ್ತೇನೆ' ಎಂದರು. "ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಸಂಪತ್ತನ್ನು ಹೇಗೆ ಲೂಟಿ ಹೊಡೆದಿದ್ದಾರೆ? ಎಂಬುದು ಹಗರಣದ ಮೂಲಕದ ಬೆಳಕಿಗೆ ಬರಲಿದೆ ಎಂದು ಹೇಳಿದರು.
ಅಂತೆಯೇ 'ಫಲಿತಾಂಶ ಪ್ರಕಟವಾದ ಬಳಿಕ ಜೆಡಿಎಸ್, ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಹೇಳಿಕೆಗಳನ್ನು ಕೆಲವರು ನೀಡುತ್ತಿದ್ದಾರೆ. ರಾಜ್ಯದಲ್ಲಿ ಮಹತ್ವದ ಬದಲಾವಣೆಯಾಗುವುದಂತೂ ಖಚಿತ' ಎಂದು ತಿಳಿಸಿದರು.ಇದೇ ವೇಳೆ ಗುಜರಾತ್ ನಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ? ಎಂಬ ಬಗ್ಗೆ ನನಗೆ ಕುತೂಹಲವಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು.
ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಎಚ್ ಡಿ ದೇವೇಗೌಡ
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಗುರುವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯಕ್ಕೆ ಇಂದು ಬೆಳಿಗ್ಗೆ ಆಗಮಿಸಿದ ದೇವೇಗೌಡರರು ಶ್ರೀಕಂಠೇಶ್ವರನಿಗೆ ಹಾಗೂ ಪಾರ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ಸನ್ನಿಧಿಯಲ್ಲಿ ಸುಮಾರು 5 ನಿಮಿಷ ಧ್ಯಾನ ಮಾಡಿದ ದೇವೇಗೌಡರು ನಂತರ ಅರ್ಚಕರು ನೀಡಿದ ಪ್ರಸಾದ ಸ್ವೀಕರಿಸಿ ಸಮಾರಂಭಕ್ಕೆ ತೆರಳಿದರು.
ಈ ವೇಳೆ ಮಾತನಾಡಿದ ದೇವೇಗೌಡ ಅವರು, 'ನಾನು ಚಿಕ್ಕವನಿದ್ದಾಗ ನನಗೆ ಕಿವಿ ಕೇಳಿಸುತ್ತಿರಲಿಲ್ಲ. ಆಗ ನನ್ನ ಅಪ್ಪ, ಅಮ್ಮ ನನ್ನನ್ನು ಇಲ್ಲಿಗೆ ಕರೆ ತಂದು ಮುಡಿ ಕೊಟ್ಟರು. ಅಂದಿನಿಂದ ನಾನು ನಂಜನಗೂಡಿನ ನಂಜುಂಡೇಶ್ವರನನ್ನು ನಂಬಿದ್ದೇನೆ. ನಂಜನಗೂಡಿನ ಜನರಲ್ಲೂ ನನಗೆ ಅಪಾರ ವಿಶ್ವಾಸ ಇದೆ. 2018ರ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics