ರಾಯಚೂರು: ಇವಿಎಂ(ವಿದ್ಯುನ್ಮಾನ ಮತಯಂತ್ರ) ತಿರುಚುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರಗಳನ್ನೇ ಬಳಕೆ ಮಾಡಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಇವಿಎಂ ಮತಯಂತ್ರಗಳ ಬಗ್ಗೆ ದೇಶಾದ್ಯಂತ ಸಂಶಯ ವ್ಯಕ್ತವಾಗುತ್ತಿದೆ. ಅಲ್ಲದೆ ನಾನು ಸಹ ಕೆಲ ತಜ್ಞರೊಂದಿಗೆ ಚರ್ಚಿಸಿದ್ದು, ಇವಿಎಂ ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ಗಳನ್ನೇ ಬಳಸಿದರೆ ಒಳ್ಳೆಯದು ಎಂದರು.
'ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಅವರೂ ಮತ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದಾರೆ. ಅಮೆರಿಕ, ಜರ್ಮನಿಯಂತ ದೇಶಗಳು ಇವಿಎಂಗೆ ಹೋಗಿ ಈಗ ಮತ್ತೆ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸುತ್ತಿವೆ. ಇಲ್ಲೂ ಹಾಗೇ ಆಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ಗುಜರಾತ್ ಚುನಾವಣೆಯ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಗುಜರಾತ್ ವಿಚಾರವೇ ಬೇರೆ, ರಾಜ್ಯದ ವಿಚಾರಗಳೇ ಬೇರೆ. ಅಲ್ಲಿಗೂ, ಇಲ್ಲಿಗೂ ತುಂಬಾ ವ್ಯತ್ಯಾಸವಿದೆ. ಹೀಗಾಗಿ ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಇದಕ್ಕು ಮುನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ(ಕೆಪಿಸಿಸಿ) ಡಾ.ಜಿ.ಪರಮೇಶ್ವರ್ ಅವರು ಸಹ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬಳಸುವುದು ಬೇಡ. ಬ್ಯಾಲೆಟ್ ಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದರು.