ರಾಜಕೀಯ

ಕರ್ನಾಟಕ ಎಲ್ಲಾ ಧರ್ಮಕ್ಕೂ ಸಮಾನ ಮೌಲ್ಯ ನೀಡಿದೆ: ಸಿಎಂ ಸಿದ್ದರಾಮಯ್ಯ

Manjula VN
ಬೆಳಗಾವಿ: ಟಿಪ್ಪು ಜಯಂತಿ ಆಚರಣೆ ಕುರಿತು ಕಾಂಗ್ರೆಸ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ರಾಜ್ಯ ಎಲ್ಲಾ ಧರ್ಮಕ್ಕೂ ಸಮಾನ ಮೌಲ್ಯವನ್ನು ನೀಡಿದೆ ಎಂದು ಶುಕ್ರವಾರ ಹೇಳಿದ್ದಾರೆ. 
ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ನಿನ್ನೆ ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಸಿದ ಬಳಿಕ ಮಾತನಾಡಿರುವ ಅವರು, ರಾಜ್ಯದಲ್ಲಿ ನಾವು ಧಾರ್ಮಿಕ ಸಾಮರಸ್ಯವನ್ನು ಕಾಪಾಡುತ್ತಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಿಂದ ಕಲಿಯಬೇಕಿಲ್ಲ. ಯೋಗಿ ಅವರು ಮೊದಲು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳಲಿ, ಕರ್ನಾಟಕ ರಾಜ್ಯ ಎಲ್ಲಾ ಧರ್ಮಕ್ಕೂ ಸಮಾನ ಮೌಲ್ಯವನ್ನು ನೀಡಿದೆ ಎಂದು ಹೇಳಿದ್ದಾರೆ. 
ರಾಜ್ಯದಲ್ಲಿ ಕೇವಲ ಟಿಪ್ಪು ಜಯಂತಿಯಷ್ಟೇ ಅಲ್ಲ, ಕನಕ ಜಯಂತಿ, ವಾಲ್ಮೀಕಿ, ಶಿವಾಜಿ, ರಾಣಿ ಚೆನ್ನಮ್ಮ, ಭಗೀರಥ, ಕೃಷ್ಣ, ಮಹಾವೀರ, ಸೇವಾಲಾಲ್ ಸೇರಿದಂತೆ ಎಲ್ಲಾ ಸಂತರು ಹಾಗೂ ಶರಣರ ಜಯಂತಿಗಳನ್ನೂ ಆಚರಿಸುತ್ತೇವೆ. ಶ್ರೀರಾಮ, ಶ್ರೀಕೃಷ್ಣ ಇರುವುದು ಇವರೊಬ್ಬರಿಗೇನಾ? ನಾನು ಈ ಮಣ್ಣಿನ ಮಗ. ಇಲ್ಲಿನ ಇತಿಹಾಸ, ರಾಜ್ಯದ ಧರ್ಮದ ವಿಚಾರ ನನಗೆ ಗೊತ್ತು. ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಂಡರೆ ಉತ್ತಮ. ಹಿಂದುತ್ವ ಎಂಬುದು ಯಾರೊಬ್ಬರ ಆಸ್ತಿಯಲ್ಲ. ನಾವೂ ಕೂಡ ಹಿಂದೂಗಳೇ. ನಾವು ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಜೈನರ ವಿರುದ್ಧವಿಲ್ಲ ಎಂದು ಯೋಗಿ ಆದಿತ್ಯನಾಥ್ ಅವರಿಗೆ ಟಾಂಗ್ ನೀಡಿದ್ದಾರೆ. 
SCROLL FOR NEXT