ರಾಜಕೀಯ

ಮಹಾದಾಯಿ ವಿವಾದ ಬಗೆಹರಿಸಲು ಶೀಘ್ರವೇ ಪ್ರಧಾನಿ ಭೇಟಿ: ಸಚಿವ ಟಿ.ಬಿ.ಜಯಚಂದ್ರ

Sumana Upadhyaya
ಬೆಂಗಳೂರು: ಮಹಾದಾಯಿ ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗುವುದಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ನಿನ್ನೆ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈ ಸಂಬಂಧ ಪತ್ರ ಬರೆದಿದ್ದಾರೆ, ರಾಜಕೀಯ ಹಸ್ತಕ್ಷೇಪ ಇಲ್ಲದೆ, ಸಮಸ್ಯೆ ಪರಿಹರಿಸಿಕೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಒಂದು ಸಾವಿರದ 300 ನ್ಯಾಯಾಲಯಗಳಲ್ಲಿ ಸುಮಾರು 14 ಲಕ್ಷ ವ್ಯಾಜ್ಯಗಳು ಬಾಕಿ ಇವೆ, ಪ್ರಕರಣಗಳ ಶೀಘ್ರ ವಿಲೇವಾರಿಯಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಮೌಢ್ಯ ನಿಷೇಧ ಸೇರಿದಂತೆ ಸುಮಾರು 169 ಕಾನೂನುಗಳನ್ನು ಜಾರಿಗೆ ತರಲಾಗಿದೆ, ಕಾನೂನಿನಲ್ಲಿ ಮಾರ್ಪಾಡು ಆಗಬೇಕಿದೆ, ಈ ದಿಸೆಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. 
ಸಿವಿಲ್ ನ್ಯಾಯಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ಸಮಾಜವನ್ನು ಆರೋಗ್ಯ ಪೂರ್ಣವಾಗಿ ಕಾಪಾಡಿಕೊಳ್ಳಲು ಮನುಷ್ಯನ ಭಾವನೆಗಳಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು. 
SCROLL FOR NEXT