ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ 1 ಸಾವಿರ ಕೋಟಿ ರು ಹಣ ಸಂದಾಯ ಮಾಡಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯಡಿಯೂರಪ್ಪ ಅವರದ್ದು ಆಧಾರರಹಿತವಾದ ಆರೋಪ, ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ, ತಾವು ಮಾಡಿರುವ ಆರೋಪವನ್ನು ಯಡಿಯೂರಪ್ಪ ದಾಖಲೆ ಸಮೇತ ಸಾಬೀತು ಪಡಿಸಲಿ ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಸವಾಲು ಹಾಕಿದ್ದಾರೆ.
ಚುನಾವಣಾ ಆಯೋಗದ ಆದೇಶದಂತೆ ಎಲ್ಲಾ ಪಕ್ಷಗಳು ಹಣ ಖರ್ಚು ಮಾಡುತ್ತವೆ. ಆದರೆ ಕಾಂಗ್ರೆಸ್ ಮಾತ್ರವೇ ಹಣ ಖರ್ಚು ಮಾಡುತ್ತಿದೆ ಎಂಬ ರೀತಿಯಲ್ಲಿ ಯಡಿಯೂರಪ್ಪ ಆರೋಪ ಮಾಡುತ್ತಿದ್ದಾರೆ ಎಂದು ಜಾರ್ಜ್ ಹೇಳಿದ್ದಾರೆ.
ಕಾಂಗ್ರೆಸ್ ಹೈ ಕಮಾಂಡ್ ಗೆ ಹಣ ನೀಡುವ ಅಗತ್ಯವಿಲ್ಲ, ಯಡಿಯೂರಪ್ಪ ಅವರ ಆರೋಪದ ಮೇಲೆ ನನಗೆ ಸಂಶಯ ಮೂಡುತ್ತಿದೆ, ಆದಾಯ ತೆರಿಗೆ ಅಥವಾ ಜಾರಿ ನಿರ್ದೇಶಾನಾಲಯ ಇಲಾಖೆಗಳು ಯಡಿಯೂರಪ್ಪ ಅವರಿಗೆ ಮಾಹಿತಿ ಕೊಡುತ್ತಿವೆ ಎಂಬದರ ಬಗ್ಗೆ ನನಗೆ ಆಶ್ಚರ್ಯ ಉಂಟಾಗುತ್ತಿದೆ ಎಂದು ಕಾಂಗ್ರೆಸ ಮುಖಂಡ ಬಿ.ಎಸ್ ಶಂಕರ್ ಹೇಳಿದ್ದಾರೆ. ಯಾವುದೇ ಸೂಕ್ತ ಆಧಾರದ ಇಲ್ಲದೇ ಸುಖಾಸುಮ್ಮನೆ ಆರೋಪ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಯಾವುದೇ ದಾಖಲೆಯಿಲ್ಲದೇ ಆರೋಪ ಮಾಡುವುದು ಯಡಿಯೂರಪ್ಪ ಅವರ ಹವ್ಯಾಸವಾಗಿದೆ, ಎಂದು ಶಾಸಕ ಸೋಮಶೇಖರ್ ತಿಳಿಸಿದ್ದಾರೆ.