ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಕ್ರಮವನ್ನು ಖಂಡಿಸಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದರು.
ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದರು. ಕೋಳಿವಾಡ ಅದಕ್ಕೆ ಅವಕಾಶ ನೀಡಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕವಾಗಿ ವಿಷಯ ಮಂಡಿಸಲು ಅವಕಾಶ ನೀಡಬೇಕು ಎಂಬ ಒತ್ತಾಯಕ್ಕೂ ಕೋಳಿವಾಡ ಮಣಿಯಲಿಲ್ಲ.
ಅನುರಾಗ್ ತಿವಾರಿ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿ. ಬೆಂಗಳೂರಿನಲ್ಲಿರುವ ಅವರ ಸಂಬಂಧಿಕರು ಪಾರದರ್ಶಕ ತನಿಖೆ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಕನಿಷ್ಠ ಸೌಜನ್ಯವನ್ನು ತೋರುತ್ತಿಲ್ಲ ಎಂದು ಶೆಟ್ಟರ್ ಆರೋಪಿಸಿದರು. ಸರ್ಕಾರವು ಅನುರಾಗ್ ತಿವಾರಿ ಸಾವಿನ ಪ್ರಕರಣವನ್ನು ಮುಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಅವರು ಗುಡುಗಿದರು.
ಅನಂತರ ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ಶೆಟ್ಟರ್ ಧಾವಿಸಿದಾಗ ಬಿಜೆಪಿಯ ಸದಸ್ಯರು ಅವರನ್ನು ಹಿಂಬಾಲಿಸಿದರು. ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಏರಿದ ಧ್ವನಿಯಲ್ಲಿ ಟೀಕಾ ಪ್ರಹಾರ ನಡೆಸಿದರು.
ಈಗ ಪ್ರಾಥಮಿಕವಾಗಿ ವಿಷಯ ಮಂಡನೆ ಮಾಡಿ. ಬಳಿಕ ಬೇರೊಂದು ನಿಯಮದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುತ್ತೇನೆ’ ಎಂದು ಕೋಳಿವಾಡ ಹೇಳಿದರು. ಸಭಾಧ್ಯಕ್ಷರ ಮನವಿಯನ್ನು ಪುರಸ್ಕರಿಸಿ ಬಿಜೆಪಿ ಸದಸ್ಯರು ಧರಣಿ ಹಿಂತೆಗೆದುಕೊಂಡರು.
ಅನುರಾಗ್ ತಿವಾರಿ ಕಳೆದ ತಿಂಗಳು ಲಖನೌದಲ್ಲಿ ಸಂಶಯಾಸ್ಪದವಾಗಿ ಮೃತ ಪಟ್ಟಿದ್ದರು. ಉತ್ತರ ಪ್ರದೇಶದ ಎಸ್‌ಐಟಿ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. ಹೀಗಿರುವಾಗ ಈ ಪ್ರಕರಣವನ್ನು ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆ ಮಾಡುವ ಅವಶ್ಯಕತೆ ಏನಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos