ಬೆಂಗಳೂರು: ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಅಧಿಕೃತವಾಗಿ ಸೋಮವಾರ ಪಕ್ಷಕ್ಕೆ ಆಹ್ವಾನಿಸಿದ್ದಾರೆ.
ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಎಸ್ ಎಂ ಕೃಷ್ಣಾ ನಿವಾಸಕ್ಕೆ ಆಗಮಿಸಿ ಅಧಿಕೃತವಾಗಿ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಈ ವೇಳೆ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೋರ್ವ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಸಾಥ್ ನೀಡಿದರು. ಬಿಎಸ್ ಯಡಿಯೂರಪ್ಪ ಅವರು ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಕೃಷ್ಣಾ ಅವರು ಪತ್ನಿ ಸಮೇತರಾಗಿ ಮನೆ ಬಾಗಿಲಿಗೆ ಬಂದು ಹೂಗುಚ್ಛ ನೀಡಿ ಬಿಎಸ್ ವೈ ಅವರನ್ನು ಸ್ವಾಗತಿಸಿದರು.
ಒಂದಷ್ಟು ಹೊತ್ತು ಉಭಯ ಕುಶಲೋಪರಿ ವಿಚಾರಿಸಿದ ಯಡಿಯೂರಪ್ಪ ಅವರ ಬಳಿಕ ಎಸ್ ಎಂ ಕೃಷ್ಣಾ ಅವರನ್ನು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು.
ಇನ್ನು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಎಸ್ ಎಂ ಕೃಷ್ಣಾ ಅವರ ಬಿಜೆಪಿ ಸೇರ್ಪಡೆ ಖಚಿತ. ಶೀಘ್ರದಲ್ಲೇ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು. ಅಂತೆಯೇ ಅವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿಯ ಕುರಿತು ಕಿಡಿಕಾರಿದ ಯಡಿಯೂರಪ್ಪ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದವರ ಪೈಕಿ ಎಸ್ ಎಂಕೆ ಪ್ರಮುಖರು. ಇಂತಹ ಧುರೀಣರನ್ನು ನಡೆಸಿಕೊಂಡ ರೀತಿ ಸರಿಯಲ್ಲ ಎಂದು ಹೇಳಿದರು.
ಕೃಷ್ಣಾ ನಿರ್ಧಾರ ಪ್ರಕಟಿಸಿಲ್ಲ!
ಆದರೆ ಪ್ರಸ್ತುತ ಯಡಿಯೂರಪ್ಪ ಅವರು ಅಧಿಕೃತವಾಗಿ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರೆಯಾದರೂ, ಬಿಜೆಪಿ ಸೇರ್ಪಡೆ ಕುರಿತಂತೆ ಕೃಷ್ಣಾ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಆದರೆ ಮೂಲಗಳು ತಿಳಿಸಿರುವಂತೆ ಶೀಘ್ರದಲ್ಲೇ ಕೃಷ್ಣಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಭೇಟಿ ಬಳಿಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾಲೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.