ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಮೈಸೂರು: ಪಂಚರಾಜ್ಯಗಳ ಸಮರ ಅಂತ್ಯಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲಿ ಉಪಚುನಾವಣೆಯ ಕಾವು ಏರುತ್ತಿದ್ದು, ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮಾವೇಶ ನಡೆಸಿ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
ಉಪಚುನಾವಣೆಗಳನ್ನು ಕಾಣಲಿರುವ ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಬಾ ಕ್ಷೇತ್ರಗಳಲ್ಲಿ ನಿನ್ನೆ ಸಂಚರಿಸಿ ಪ್ರಚಾರ ಸಭೆಗಳನ್ನು ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ವಿರುದ್ಧ ವಾಗ್ಯುದ್ಧ ನಡೆಸಿದರು. ರಾಜ್ಯವನ್ನು ಲೂಟಿ ಮಾಡಿ ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋದವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದರು.
ನಂಜನಗೂಡಿನಲ್ಲಿರುವ ಎಸ್'ಸಿ ಮತ್ತು ಎಸ್'ಟಿಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಐತಿಹಾಸಿಕ ನಿರ್ಧಾರವನ್ನು ಕೈಗೊಂಡು, ಕಲ್ಯಾಣ ನಿಧಿಯನ್ನು ಸ್ಥಾಪನೆ ಮಾಡಿತು ಎಂದು ಹೇಳಿದರು.
ಇದೇ ವೇಳೆ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ವಿರುದ್ಧ ಕಿಡಿಕಾಡಿದ ಅವರು, ಮೂರು ವರ್ಷಗಳ ಕಾಲ ನನ್ನ ಸಚಿವಾಲಯದಲ್ಲಿ ಪ್ರಸಾದ್ ಅವರು ಸೇವೆ ಸಲ್ಲಿಸಿದ್ದಾರೆ. ಅವರಿಗೆ ಅವರ ಆತ್ಮ ಗೌರವದ ಬಗ್ಗೆ ಚಿಂತಿಯಿಲ್ಲ ಎಂದು ತಿಳಿಸಿದ್ದಾರೆ.
ಇದರಂತೆಯೇ ಬಿ.ಎಸ್ ಯಡಿಯೂರಪ್ಪ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೆಂಡಕಾರಿದ್ದು, ಸಿದ್ದರಾಮಯ್ಯ ಅವರ ಅಧರ್ಮದ ಆಡಳಿತ, ದರೋಡೆ, ಲೂಟಿ ಮೊದಲಾದ ವಿಚಾರಗಳನ್ನು ಮತದಾರರ ಮುಂದಿಡುತ್ತೇವೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸದೆ ಕೇವಲ 2018ರ ಚುನಾವಣೆಯ ಹಗಲು ಕನಸು ಕಾಣಲು ಸಾಧ್ಯವಿಲ್ಲ. ಈ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಇಲ್ಲಸಲ್ಲದ ಆರೋಪಗಳನ್ನು ಮಾಡಿ ನನ್ನನ್ನು ಜೈಲಿಗೆ ಕಳುಹಿಸಿದ ಕಾಂಗ್ರೆಸ್'ಗೆ ವೀರಶೈವ ಸಮುದಾಯ ಶಿಕ್ಷೆ ನೀಡಬೇಕಿದೆ. ನಿಮ್ಮ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನೋಡಬೇಕಿದ್ದರೆ, ಈ ಉಪಚುನಾವಣೆಯಲ್ಲಿ ನಾನು ಭರ್ಜರಿ ಗೆಲವು ಸಾಧಿಸುವಂತೆ ಮಾಡಿ, ಹಗರಣಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೆಳಗೆ ಬೀಳುವಂತೆ ಮಾಡುತ್ತದೆ. ಸಿದ್ದರಾಮಯ್ಯ ಅವರ ಸರ್ಕಾರ ಮುಂದಿನ 6 ತಿಂಗಳೂ ಕೂಡ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics