ಬೆಂಗಳೂರು: ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಹೊಸ ಜವಾಬ್ದಾರಿ ನೀಡಿದೆ.
ಎಐಸಿಸಿಯ ಸಾಮಾಜಿಕ ಮಾಧ್ಯಮ ಪ್ರಚಾರ (ಸೋಷಿಯಲ್ ಮೀಡಿಯಾ ಕ್ಯಾಂಪೇನ್) ವಿಭಾಗದ ಮುಖ್ಯಸ್ಥೆಯಾಗಿ ರಮ್ಯಾ ಅವರನ್ನು ನೇಮಿಸಲಾಗಿದೆ. ಇದುವರೆಗೆ ಈ ವಿಭಾಗವನ್ನು ನಿರ್ವಹಿಸುತ್ತಿದ್ದ ದೀಪೇಂದರ್ ಹೂಡಾ ಅವರಿಗೆ ಬೇರೆ ಹೊಣೆ ವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಎಸ್ .ಎಂ. ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಂದರ್ಭ ರಮ್ಯಾ ಅವರೂ ಪಕ್ಷ ತೊರೆಯಲಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ, ಕಾಂಗ್ರೆಸ್ ಬಿಡುವುದಿಲ್ಲ ಎಂದು ಸ್ವತಃ ರಮ್ಯಾ ಹೇಳಿಕೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು.
ಪಕ್ಷದ ವಿವಿಧ ವಿಭಾಗಗಳಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಬದಲಾವಣೆ ತರುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಮ್ಯಾ ಅವರು ಈಗಾಗಲೇ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಮ್ಯಾ ಅವರಿಗೆ ಜವಾಬ್ದಾರಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.