ರಾಜಕೀಯ

ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ-ಪುಟ್ಟ ಗೊಂದಲಗಳಿವೆ, ಶೀಘ್ರವೇ ಬಗೆಹರಿಯುತ್ತವೆ: ವೇಣುಗೋಪಾಲ್

Shilpa D
ಬೆಂಗಳೂರು: ಪಕ್ಷದೊಳಗೆ ಕೆಲವೊಂದು ಸಣ್ಣ-ಪುಟ್ಟ ಗೊಂದಲಗಳಿದ್ದು, ಶೀಘ್ರವೇ ಬಗೆಹರಿಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ,ಸಿ ವೇಣುಗೋಪಾಲ್ ಹೇಳಿದ್ದಾರೆ.
ಕೆಪಿಸಿಸಿ ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇ ತಿಂಗಳ ಅಂತ್ಯದೊಳಗೆ ಕೆಪಿಸಿಸಿ ಪುನಾರಚನೆ ಮಾಡಲಾಗುವುದು ಎಂಬ ಭರವಸೆ ವ್ಯಕ್ತ ಪಡಿಸಿದರು.
ಕಳೆದ ಮೂರು ದಿನಗಳಿಂದ ವೇಣುಗೋಪಾಲ್ ಮತ್ತು ಎಐಸಿಸಿ ಕಾರ್ಯದರ್ಶಿಗಳಾದ ಮಣಕಮ್ ಟ್ಯಾಗೋರ್, ಪಿ.ಸಿ ವಿಷ್ಣುನಾಥ್, ಮಧು ಯಕ್ಷಿ ಗೌಡ್ ಮತ್ತು ಸಕೆ ಶೈಲಜನಾಥ್ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿ ಸಮಾಲೋಚಿಸಿ ಹಲವು ವಿಷಯಗಳ ಸಂಬಂಧ ಮಾಹಿತಿ ಸಂಗ್ರಹಿಸಿದ್ದಾರೆ. 
ನಾವು ಮ್ಯಾರಥಾನ್ ಸಭೆ ನಡೆಸಿ 431 ಮುಖಂಡರುಗಳ ಜೊತೆ ಮಾತುಕತೆ ನಡೆಸಿದ್ದೇವೆ, ನಾಯಕರುಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂದು ಚರ್ಚೆಯ ನಂತರ ನಮಗೆ ಅನಿಸಿದೆ. ಹಿರಿಯ ನಾಯಕರುಗಳ ಸಹಾದಿಂದ ಶೀಘ್ರವೇ ಭಿನ್ನಾಬಿಪ್ರಾಯಗಳನ್ನು ನಿವಾರಿಸಲಾಗುವುದು ಎಂದು ವೇಣುಗೋಪಾಲ್  ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ವೇಣುಗೋಪಾಲ್ ಕೆಪಿಸಿಸಿ ಪ್ರಸಕ್ತ ಅಧ್ಯಕ್ಷರ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದೆ, ಆದರೆ ಪಕ್ಷವನ್ನು ಎಲ್ಲಾ ಹಂತಗಳಲ್ಲಿಯೂ ಮತ್ತಷ್ಟು ಸಮರ್ಥಗೊಳಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಮೇ ತಿಂಗಳ ಅಂತ್ಯದೊಳಗೆ ಕೆಪಿಸಿಸಿ ಪುನಾರಚನೆ ಮಾಡುವುದಾಗಿ ಹೇಳಿದ ಅವರು, ಅಧ್ಯಕ್ಷರು ಯಾರಾಗುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ತಾವು ಸಂಗ್ರಹಿಸಿರುವ ಮಾಹಿತಿನ್ನು ಹೈಕಮಾಂಡ್ ಗೆ ನೀಡಲಿದ್ದು, ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದರು. 
SCROLL FOR NEXT