ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯ ಉದ್ಘಾಟನಾ ಸಮಾವೇಶಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಜನರು ಬಾರದೆ ಸಹಸ್ರಾರು ಆಸನಗಳು ಖಾಲಿ ಉಳಿದಿದ್ದು, ಬಿಜೆಪಿ ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿತು.
ಸುಮಾರು 1 ಲಕ್ಷ ಜನ ಕಾರ್ಯಕ್ರಮದಲ್ಲಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಆಸನ ಮತ್ತು ಊಟೋಪಚಾರದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಅರ್ಧಕ್ಕೂ ಹೆಚ್ಚು ಆಸನಗಳು ಜನರಿಲ್ಲದೆ ಸಮಾವೇಶ ಭಣಗುಟ್ಟಿತ್ತಿತ್ತು. ಈ ಹಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಮಾವೇಶಕ್ಕೆ 2 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಲಿದ್ದಾರೆಂದು ಹೇಳಿದ್ದರು. ಆದರೆ, ಯಾತ್ರೆಯ ಉದ್ಘಾಟನೆ ಸಮಾವೇಶದ ವಾಸ್ತವದ ಸಂಗತಿಯೇ ಭಿನ್ನವಾಗಿತ್ತು.
ಸಮಾವೇಶಕ್ಕೆ ಬೆಳಿಗ್ಗೆ 11.30ಕ್ಕೆ ಆರಂಭವಾಗಬೇಕಿತ್ತು. ಆದರೆ, ಆ ಹೊತ್ತಿಗೆ ತೀನಾ ಕಡಿಮೆ ಸಂಖ್ಯೆಯಲ್ಲಿ ಜನರಿದ್ದರು. ಕೆಲ ಸಮಯ ಕಳೆಯುತ್ತಿದ್ದಂತೆಯೇ ನಿಧಾನವಾಗಿ ಜನರು ಬರಲು ಆರಂಭಿಸಿದ್ದರು. ಅಮಿತ್ ಶಾ ಅವರು ಸಮಾವೇಶಕ್ಕೆ ಆಗಮಿಸುವಷ್ಟರಲ್ಲಿ ಮಧ್ಯಾಹ್ನ 1.45 ಆಗಿತ್ತು. ಆದರೆ, ಆ ವೇಳೆಯೂ ಅರ್ಧದಷ್ಟು ಆಸನಗಳು ಮಾತ್ರ ಭರ್ತಿಯಾಗಿರಲಿಲ್ಲ. ಇದು ಅಮಿತ್ ಶಾ ಅವರಿಗೆ ತೀವ್ರ ಬೇಸರವನ್ನು ಮೂಡಿಸಿತ್ತು. ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪಕ್ಷದಲ್ಲಿದ್ದ ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್ ಕುಮಾರ್ ಮೊದಲಾದವರಿಗೆ ವೇದಿಕೆ ಮುಂಭಾದತ್ತ ಕೈ ತೋರಿಸಿ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂದಿತ್ತು.
ಯಾತ್ರೆಯ ಮೊದಲ ದಿನದಂದೆ ಸಮಾವೇಶಕ್ಕೆ ಜನರು ಬಾರದೆ ಇರುವುದು ಅಮಿತ್ ಶಾ ಅವರಿಗೆ ತೀವ್ರ ಬೇಸರ ಹಾಗೂ ನಿರಾಶೆಯನ್ನುಂಟು ಮಾಡಿತ್ತು. ಉದ್ದೇಶದಂತೆ ಯಾತ್ರೆಗೆ ಲಕ್ಷ ಬೈಕ್ ಗಳಿರಲಿ, ಹತ್ತು ಸಾವಿರಕ್ಕಿಂತ ಹೆಚ್ಚು ಬೈಕ್ ಗಳೂ ಬಂದಿರಲಿಲ್ಲ. ಹೆಲಿಕಾಪ್ಟರ್ ನಲ್ಲೇ ಸಮಾವೇಶದ ಚಿತ್ರಣ ವೀಕ್ಷಿಸಿದ ಅವರು ವೇದಿಕೆ ಏರುವ ಹೊತ್ತಿಗೆ ಬೇಸರಗೊಂಡಿದ್ದು ಸ್ಪಷ್ಟವಾಗಿ ಕಂಡು ಬಂದಿತ್ತು.
ಯಾತ್ರೆಯ ಸಮಾವೇಶಕ್ಕೆ ಜನರು ಬಾರದೆ ಇರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧವೇ ಬಿಜೆಪಿ ನಾಯಕರು ಆರೋಪ ಮಾಡಿದ್ದು, ಬಿಜೆಪಿ ಕಾರ್ಯಕರ್ತರು ನಗರ ಪ್ರವೇಶ ಮಾಡುವುದಕ್ಕೆ ರಾಜ್ಯ ಸರ್ಕಾರದ ನಿರ್ಬಂಧ ಹೇರುತ್ತಿದೆ ಎಂದು ಹೇಳಿಕೊಂಡಿದ್ದಾರೆ.