ರಾಜಕೀಯ

ಜೆಡಿಎಸ್ 'ಕುಮಾರಪರ್ವ' ಯಾತ್ರೆಗೆ ಹೆಚ್.ಡಿ. ಕುಮಾರಸ್ವಾಮಿ ಚಾಲನೆ

Sumana Upadhyaya
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಬಿರುಸಿನ ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಜೆಡಿಎಸ್ ಅದಕ್ಕೆ ಪೂರ್ವಭಾವಿಯಾಗಿ ಕುಮಾರಪರ್ವ ಯಾತ್ರೆಗೆ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕರ್ನಾಟಕ ವಿಕಾಸ ವಾಹಿನಿ ವಾಹನಕ್ಕೆ ಸಂಚಾರ ನೀಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದೆ. 
ಹೈಟೆಕ್ ವ್ಯವಸ್ಥೆಯನ್ನು ಒಳಗೊಂಡಿರುವ ಜೆಡಿಎಸ್ ನ ವಿಕಾಸ ವಾಹಿನಿ, ಪಕ್ಷ ಅಧಿಕಾರಕ್ಕೆ ಬಂದರೆ ಈಡೇರಿಸುವ ಭರವಸೆಗಳನ್ನೊಳಗೊಂಡ ವಾಕ್ಯಗಳೊಂದಿಗೆ ರಾರಾಜಿಸುತ್ತಿವೆ. ಬಲೂನ್ ಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಜೆಡಿಎಸ್ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ ಯಾತ್ರೆಗೆ ಚಾಲನೆ ನೀಡಿದರು.
ನಂತರ ವಿಕಾಸ ವಾಹಿನಿ ವಾಹನವನ್ನೇರಿ ಚಾಮುಂಡೇಶ್ವರಿ ದೇಗುಲವನ್ನು ಒಂದು ಸುತ್ತು ಹಾಕಿದರು.ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಪರ್ವ ಮೂಲಕ ನಾವು ಯಾವುದೇ ಪಕ್ಷಗಳಿಗೆ ಸಂದೇಶ ನೀಡುವುದಿಲ್ಲ. ರಾಜ್ಯದ ಜನತೆಗೆ ನಾವು ಸಂದೇಶ ನೀಡಲು ಹೊರಟಿದ್ದೇವೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿ ರೈತರ ಆತ್ಮಹತ್ಯೆ ನಿಲ್ಲಿಸಬೇಕೆಂಬ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
 ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ನ್ನು 113 ಕ್ಷೇತ್ರಗಳಲ್ಲಿ ಗೆಲ್ಲಿಸುವುದು ನಮ್ಮ ಗುರಿಯಾಗಿದೆ. ಈ ಕಾರಣಕ್ಕಾಗಿಯೇ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಚಾಮುಂಡಿ ಕ್ಷೇತ್ರದಲ್ಲಿ ರೆಬೆಲ್ ಶಾಸಕರು ನನಗೆ ಸವಾಲು ಅಲ್ಲ. ಇಲ್ಲಿನ ಮತದಾರರು ಗೆಲುವು ತಂದುಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ಕೊನೆ ಕ್ಷಣದಲ್ಲಿ ಪಕ್ಷಕ್ಕೆ ಬರುವವರನ್ನು ಜೆಡಿಎಸ್ ಸ್ವಾಗತಿಸುವುದಿಲ್ಲ.ಅವಕಾಶವಾದಿ ರಾಜಕಾರಣವನ್ನು ನಾವು ಒಪ್ಪುವುದಿಲ್ಲ. ಯಾವುದೇ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. 
SCROLL FOR NEXT