ಮಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಬಿಎಸ್ ವೈ
ಮಂಗಳೂರು: ದುಬಾರಿ ಹುಬ್ಲೋಟ್ ವಾಚ್ ಪ್ರಕರಣದ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟ ಎಂಬ ವಿಚಾರ ಸಾಬೀತಾಗಿದ್ದು, ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ವಿರುದ್ಧ ಅತ್ಯಾಚಾರ ಆರೋಪವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.
ಭಾನುವಾರ ಕರ್ನಾಟಕ ಪರಿವರ್ತನಾ ಯಾತ್ರೆ ನಿಮಿತ್ತ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಅವರು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಅವರ ವಿರುದ್ಧ ಅತ್ಯಾಚಾರ ಆರೋಪ ವಿದೆ. ದುಬಾರಿ ಹ್ಯೂಬ್ಲೋಟ್ ವಾಚ್ ಪ್ರಕರಣ ಸೇರಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪಗಳು ಕೇಳಿಬರುತ್ತಿವೆ. ಇಷ್ಟೆಲ್ಲದರ ನಡುವೆಯೂ ಸಿಎಂ ಸಿದ್ದರಾಮಯ್ಯ ತಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ನಾಳೆಯಿಂದ ಆರಂಭವಾಗಲಿರುವ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಬಂಡವಾಳವನ್ನು ದಾಖಲೆ ಸಮೇತ ಬಯಲು ಮಾಡುತ್ತೇವೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಕ್ರಮ ಡಿನೋಟಿಫಿಕೇಶನ್ ಪ್ರಕರಣ, ಬಿಬಿಎಂಪಿ ಹಗರಣ, ಹ್ಯೂಬ್ಲೋಟ್ ವಾಚ್ ಪ್ರಕರಣ, ಗೋವಿಂದರಾಜ್ ಡೈರಿ ಹಗರಣ, ಸಿದ್ದರಾಮಯ್ಯ ಪುತ್ರನ ಲ್ಯಾಬ್ ಪ್ರಕರಣ ಹೀಗೆ ಪಟ್ಟಿ ಮುಂದುವರೆಯುತ್ತದೆ. ಹೀಗಿದ್ದೂ ಅದ್ಯಾವ ನೈತಿಕತೆಯ ಮೇರೆಗೆ ಸಿದ್ದರಾಮಯ್ಯ ತಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಇದೇ ವೇಳೆ, "ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಮುಖಂಡರಿಂದಾಗಿಯೇ ಜಿಲ್ಲೆಯ ಬಡವರು ಮನೆ ಕಟ್ಟಲು ಕೂಡ ಮರಳು ಪಡೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಅಕ್ರಮ ಮರಳು ಮಾಫಿಯಾದಲ್ಲಿ ಕಾಂಗ್ರೆಸ್ ಮುಖಂಡರು ಮರಳು ಮಾಫಿಯಾದಲ್ಲಿ ಭಾಗಿಯಾಗಿದ್ದು, ಇದರಿಂದಾಗಿಯೇ ಜಿಲ್ಲೆಯಲ್ಲಿ ಮರಳು ಅಭಾವ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕೂಡ ಹದಗೆಟ್ಟಿದ್ದು, ಡ್ರಗ್ಸ್ ಹಾವಳಿ ಮಿತಿ ಮೀರಿದೆ. ಇದನ್ನು ಸರ್ಕಾರ ತಡೆಗಟ್ಟಬೇಕಿತ್ತು. ಆದರೆ, ಡ್ರಗ್ಸ್ ಮಾಫಿಯಾ ಸರ್ಕಾರವನ್ನೇ ನಿಯಂತ್ರಿಸುವಂತಾಗಿದೆ. ಕರಾವಳಿಯು ಸೂಕ್ಷ್ಮ ಜಿಲ್ಲೆಯಾಗಿದ್ದು, ಇಲ್ಲಿ ಕೇರಳ ಮಾದರಿಯ ಹತ್ಯೆ, ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇದೆ. ಅಲ್ಲದೆ ಇಸಿಸ್ ಸಂಘಟನೆಗೆ ಯುವಕರನ್ನು ಸೇರ್ಪಡೆಗೊಳಿಸುವ ಏಜೆಂಟರೂ ಇಲ್ಲಿದ್ದಾರೆ. ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬಂದ ಮೂರೇ ತಿಂಗಳೊಳಗೆ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಕಚೇರಿಯನ್ನು ತೆರೆಯಲಾಗುವುದು" ಎಂದು ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪಕ್ಷದ ಮುಖಂಡರಾದ ರವಿಕುಮಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುಲೋಚನಾ ಭಟ್ ಉಪಸ್ಥಿತರಿದ್ದರು.