ರಾಜಕೀಯ

ಗಣಪತಿ ಶವಪರೀಕ್ಷೆ ವರದಿ ತಿರುಚಿದ ಆರೋಪ: ಜಾರ್ಜ್ ಪದತ್ಯಾಗಕ್ಕೆ ಬಿಜೆಪಿ ಪಟ್ಟು

Manjula VN
ಬೆಳಗಾವಿ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಮತ್ತೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ಗಣಪತಿ ಶವ ಪರೀಕ್ಷೆ ವರದಿ ತಿರುಚಲು ತಮ್ಮ ಮಲೆ ಸರ್ಕಾರ ಒತ್ತಡ ಹೇರಿತ್ತು ಎಂಬ ವೈದ್ಯೆ ಶೈಲಜಾ ಅವರು ಸಿಬಿಐಗೆ ನೀಡಿರುವ ಹೇಳಿಕೆ ವಿಧಾನಸಭೆ ತೀವ್ರ ಚರ್ಚೆ ಹಾಗೂ ಗದ್ದಲಕ್ಕೆ ಕಾರಣವಾಗಿತ್ತು. 
ಶೈಲಜಾ ಅವರ ಹೇಳಿಕೆಯನ್ನು ವಿಧಾನಸಭೆಯಲ್ಲಿ ನಿನ್ನೆ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಸಚಿವ ಕೆ.ಜೆ.ಜಾರ್ಜ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿ ಧರಣಿ ನಡೆಸಿದರು. 
ಜುಲೈ.8 ರಂದು ಗಣಪತಿಯವರ ಶವಪರೀಕ್ಷೆ ನಡೆಸಿದ್ದ ಡಾ.ಶೈಲಜಾ ಅವರು ಸರ್ಕಾರದಿಂದ ಒತ್ತಡ ಬಂದಿತ್ತು ಎಂಬರ್ಥದ ಹೇಳಿಕೆಯನ್ನು ಸಿಬಿಐ ತನಿಖೆ ವೇಳೆ ನೀಡಿದ್ದರು ಎಂದು ನಿನ್ನೆಯಷ್ಟೇ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ.ಶೈಲಜಾ ಅವರು, ಪ್ರಸ್ತುತ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಪ್ರಕರಣ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಪ್ರಕರಣ ಬಗ್ಗೆ ಸಿಬಿಐ ಅಧಿಕಾರಿಗಳೂ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 
ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಸಿದ್ದರಾಮಯ್ಯ ಅವರು ಜಾರ್ಜ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಬಣ್ಣ ಇದೀಗ ಬಯಲಾಗಿದೆ ಎಂದು ಹೇಳಿದ್ದಾರೆ. 
SCROLL FOR NEXT