ರಾಜಕೀಯ

ಬಿಎಂಐಸಿ ಯೋಜನೆಯಲ್ಲಿ ನೈಸ್ ಅಕ್ರಮ: ಒಪ್ಪಂದ ರದ್ದು ಮಾಡುವಂತೆ ಹೆಚ್'ಡಿಕೆ ಒತ್ತಾಯ

Manjula VN
ಬೆಳಗಾವಿ: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ನೈಸ್ ಸಂಸ್ಥೆ ಭಾರೀ ಅಕ್ರಮ ನಡೆಸಿರುವುದು ಸದನ ಸಮಿತಿ ವರದಿಯಲ್ಲಿ ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ಒಪ್ಪಂದವನ್ನು ರದ್ದು ಮಾಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಆಗ್ರಹಿಸಿದ್ದಾರೆ. 
ವಿಧಾನಮಂಡಲದಲ್ಲಿ ವಿಷಯ ಪ್ರಸ್ತಾಪ ಮಾಡರುವ ಕುಮಾರಸ್ವಾಮಿಯವರು, 1 ವರ್ಷದ ಹಿಂದೆಯೇ ನೈಸ್ ಸಂಸ್ಥೆಯ ಅಕ್ರಮಗಳ ಕುರಿತು ಸದನ ಸಮಿತಿ ವರದಿ ನೀಡಿದೆ. ವರದಿಯಲ್ಲಿ ನೈಸ್ ಕಂಪನಿಯು ಅಕ್ರಮ ಎಸಗಿರುವುದು ಸಾಬೀತಾಗಿದೆ. ಹೀಗಾಗಿ ಬಿಎಂಐಸಿ ರಸ್ತೆಯನ್ನು ವಶಪಡಿಸಿಕೊಂಡು ಒಪ್ಪಂದ ರದ್ದುಪಡಿಸಬೇಕು. ಇದಕ್ಕಾಗಿ ವಿಧಾನಮಂಡಲದಲ್ಲಿ ವಿಧೇಯಮವನ್ನು ಮಂಡಿಸಬೇಕೆಂದು ಹೇಳಿದ್ದಾರೆ. 
ಯೋಜನೆ ಹೆಸರಿನಲ್ಲಿ ಪ್ರತಿ ಎಕರಿಗೆ ತಲಾ ರೂ.2 ಲಕ್ಷದಂತೆ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ರೂ.15 ರಿಂದ ರೂ.20 ಕೋಟಿಗೆ ನೈಸ್ ಸಂಸ್ಥೆ ಮಾರಾಟ ಮಾಡುತ್ತಿದೆ. ನೈಸ್ ಸಂಸ್ಥೆ ಮುಖ್ಯಸ್ಥರು ಸರ್ಕಾರದ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಬಹುಮತ ಇರುವ ಸರ್ಕಾರಕ್ಕೆ ಯೋಜನೆಯನ್ನು ಸ್ವಾಧೀನಪಡಿಸಿಕೊಳ್ಳಲು ಏನು ಅಡ್ಡಿಯಿದೆ ಎಂದು ಪ್ರಶ್ನಿಸಿದ್ದಾರೆ. 
ಕಾಂಕ್ರೀಟ್ ರಸ್ತೆ ನಿರ್ಮಾಣದ ನಂತರ ಟೋಲ್ ವಸೂಲಿಗೆ ಅವಕಾಶ ಇದ್ದರೂ ಕಾಂಕ್ರೀಟ್ ರಸ್ತೆ ನಿರ್ಮಾಣದ ಮೊದಲೇ ಟೋಲ್ ವಸೂಲಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಮೂಲ ಒಪ್ಪಂದದ ಉಲ್ಲಂಘನೆಯಾಗಿದ್ದು, ಸದನ ಸಮಿತಿಯ ವರದಿ ಇದ್ದರೂ ಸರ್ಕಾರ ಏನೂ ಮಾಡಿಲ್ಲ. ಹೀಗಾಗಿ ನೈಸ್ ಕಂಪನಿಗೆ ನೀಡಿರುವ ಗುತ್ತಿಗೆ ವಾಪಸ್ ಪಡೆದು ರಸ್ತೆಯನ್ನು ವಶಪಡಿಸಿಕೊಳ್ಳಲು ವಿಧೇಯಕ ಮಂಡನೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಕುಮಾರಸ್ವಾಮಿಯವರೊಂದಿಗೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಕೂಡ ಧ್ವನಿಗೂಡಿಸಿದರು. 
SCROLL FOR NEXT