ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬೆಂಗಳೂರು: ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಮೊದಲ ಹಂತದಲ್ಲಿ 6 ಜಿಲ್ಲೆಗಳ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಉತ್ತೇಜಿತವಾಗಿರುವ ಪಕ್ಷದ ನಾಯಕರು ಬೆಂಗಳೂರಿನ ಮತದಾರರನ್ನು ಸೆಳೆಯಲು ನಗರದ ಪ್ರಮುಖ ಸ್ಥಳಗಳಲ್ಲಿ ಇಂತಹ ಮೂರು ರ್ಯಾಲಿಗಳಲ್ಲಿ ನಡೆಸಲು ಸಜ್ಜಾಗಿದ್ದಾರೆ.
ಜನರನ್ನು ಆಕರ್ಷಿಸಲು ಪಕ್ಷ ಪ್ರಮುಖ ನಾಯಕರನ್ನು ಕರೆಯಲು ನಿರ್ಧರಿಸಿದೆ.
ಡಿಸೆಂಬರ್ 10,17 ಮತ್ತು ಜನವರಿ 7ರಂದು ನಗರದ ಪ್ರಮುಖ ಕಡೆಗಳಲ್ಲಿ ರ್ಯಾಲಿ ನಡೆಸಲಿದ್ದು ಇದಕ್ಕೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಸಚಿವ ಅರುಣ್ ಜೇಟ್ಲಿ ಅವರನ್ನು ಆಹ್ವಾನಿಸಲಿದೆ. ಬೆಂಗಳೂರಿನಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿದ್ದು ಇಲ್ಲಿನ ಮತದಾರರನ್ನು ಸೆಳೆಯಲು ಕೆಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಿನ್ನೆ ಪಕ್ಷದ ಕೋರ್ ಸಮಿತಿ ಸಭೆ ನಂತರ ತಿಳಿಸಿದರು.
ಜನವರಿ 28ರಂದು ನಗರದಲ್ಲಿ ಬಿಜೆಪಿಯ ಬಹುದೊಡ್ಡ ರ್ಯಾಲಿ ನಡೆಯಲಿದ್ದು ಅದಕ್ಕೂ ಮುನ್ನ ಈ ಯಾತ್ರೆಗಳನ್ನು ಮುಗಿಸಲಾಗುತ್ತದೆ. ಜನವರಿ 28ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.
ಡಿಸೆಂಬರ್ 21ರಂದು ಹುಬ್ಬಳ್ಳಿಯಲ್ಲಿ ನಡೆಯುವ ಬಹುದೊಡ್ಡ ರ್ಯಾಲಿಯನ್ನುದ್ದೇಶಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಲಿದ್ದಾರೆ. ಬಿಜೆಪಿ ರ್ಯಾಲಿಯ ಭಾಗವಾಗಿ ನವಶಕ್ತಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಿದೆ. ಪರಿವರ್ತನ ರ್ಯಾಲಿ ಮುಗಿದ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ನಡೆಸಲಾಗುತ್ತದೆ ಎಂದು ರವಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು, ಮೈಸೂರಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಜೆಪಿಯನ್ನು ಟೀಕಿಸಿದ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ್ ಪಾಟೀಲ್ ಕ್ರಮವನ್ನು ಖಂಡಿಸಿದರು.