ಮೈಸೂರು: ತಮ್ಮ ಪುತ್ರ ಡಾ. ಯತೀಂದ್ರ ವಿರುದ್ಧ ಬಿಜೆಪಿ ನಾಯಕರು ಮಾಡಿರುವ ಆಕ್ರಮ ಭೂಮಿ ಮಂಜೂರು ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಮಾನನಷ್ಚ ಮೊಕದ್ದಮೆ ಹೂಡುತ್ತೇವೆ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಬಿಜೆಪಿಯ ವಿಧಾನಪರಿಷತ್ ಸದಸ್ಯ ಬಿಜೆ ಪುಟ್ಟಸ್ವಾಮಿ ಅವರು, ಸಿಎಂ ಪುತ್ರ ಡಾ.ಯತೀಂದ್ರ ಅವರ ವಿರುದ್ಧದ ಅಕ್ರಮ ಭೂಮಿ ಮಂಜೂರು ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಡಾ.ಯತೀಂದ್ರ ಅವರಿಗೆ ಸೇರಿರುವ ಶಾಂತಲಾ ಇಂಡಸ್ಟ್ರೀಸ್ ಗೆ ಕೇತಮಾರನಹಳ್ಳಿಯಲ್ಲಿ ಅಕ್ರಮವಾಗಿ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದೆ ಪುಟ್ಟಸ್ವಾಮಿ ಆರೋಪಿಸಿದ್ದರು.
ಈ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, "ತಮ್ಮ ಪುತ್ರನ ವಿರುದ್ಧ ಬಿಜೆಪಿ ನಾಯಕರು ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರವಾದುದು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಮಾಧ್ಯಮಗಳು ವರದಿ ಮಾಡಿರುವಂತೆ ಬಿಜೆಪಿ ನಾಯಕರು ತಮ್ಮ ಪುತ್ರ ಯತೀಂದ್ರನ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು. ನನ್ನ ಮಗನಿಂದಲೇ ಬಿಜೆಪಿ ನಾಯಕರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ತಮ್ಮ ಸಹೋದರಿ ಚಿಕ್ಕಮ್ಮ ಸಾವನ್ನಪ್ಪಿರುವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು ನಮ್ಮದು ಅವಿಭಕ್ತ ಕುಟುಂಬವಾಗಿತ್ತು. ನಮ್ಮಕ್ಕ ಮದುವೆಯಾದ ಬಳಿಕವೂ ಅವರ ಮಕ್ಕಳೆಲ್ಲಾ ದೊಡ್ಡವರಾಗುವವರೆಗೆ ನಮ್ಮ ಕುಟುಂಬ ಸದಸ್ಯರ ಜೊತೆಯೇ ವಾಸಿಸುತ್ತಿದ್ದರು. ಇತ್ತೀಚೆಗೆ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ನಾನು ಅವರನ್ನು ಕಡೆಯ ಬಾರಿ ಭೇಟಿಯಾಗಿದ್ದೆ ಎಂದು ಭಾವುಕರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics